×
Ad

ರಾಯಚೂರು | ಜೂ.23ರಂದು ಬುಡಕಟ್ಟು ಉತ್ಸವ, 371ಜೆ ದಶಮಾನೋತ್ಸವ ಕಾರ್ಯಕ್ರಮ

Update: 2025-06-22 19:02 IST

ರಾಯಚೂರು: ಜೂ.23ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಬುಡಕಟ್ಟು ಉತ್ಸವ, 371 (ಜೆ) ದಶಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಿದ್ದತೆ ನಡೆದಿದ್ದು, 936 ಕೋಟಿ ರೂ. ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.

ವಿವಿಧ ಯೋಜನೆಗಳ ಸುಮಾರು 150ಕ್ಕೂ ಅಧಿಕ ಫಲಾನುಭವಿಗಳಿಗೆ ಕಾರು, ಹೊಲಿಗೆ ಯಂತ್ರ, ಟ್ರಾಕ್ಟರ್, ತ್ರಿಚಕ್ರ ವಾಹನ, ವಿತರಣೆ ಮಾಡಲಾಗುತ್ತದೆ. ಸುಮಾರು 40 ರಿಂದ 50 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹಾದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್, ಇಂಧನ ಸಚಿವ ಕೆ.ಜೆ.ಜಾರ್ಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ 10 ಸಚಿವರು ಆಗಮಿಸಲಿದ್ದಾರೆ ಎಂದು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ರಾಯಚೂರು ಗ್ರಾಮೀಣ ವಿಧಾನಸಭಾ‌ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಹೇಳಿದರು.

ರಾಯಚೂರು ತಾಲೂಕಿನ ಯರಗೇರಾ ಗ್ರಾಮದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳು ಸಿದ್ದತೆ ಕುರಿತು ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬುಡಕಟ್ಟು ಉತ್ಸವಕ್ಕೆ ಸುಮಾರು 50ಕ್ಕೂ ಅಧಿಕ ಸ್ಟಾಲ್‌ಗಳ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಾ ತಂಡಗಳು ಆಗಮಿಸಲಿವೆ ಎಂದರು.

ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾಲಯ ಆವರಣದಲ್ಲಿ ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗಿದೆ, ಸಿಎಂ ಅವರು ನೂತನ ವಾಲ್ಮೀಕಿ‌ ವಿವಿಯ ನಾಮಫಲಕ ಅನಾವರಣಗೊಳಿಸಿದ ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಂಸದ ಕುಮಾರ ನಾಯಕ, ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ, ಶಾಸಕ ಹಂಪನಗೌಡ ಬಾದರ್ಲಿ, ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ಕೆಪಿಸಿಸಿ ಮಾಧ್ಯಮ ವಕ್ತಾರ ಡಾ. ರಜಾಕ್ ಉಸ್ತಾದ್, ಅಬ್ದುಲ್ ಕರೀಮ್, ಚನ್ನಬಸವ ಸೇರಿದಂತೆ ಅನೇಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News