×
Ad

ಸಿಂಧನೂರು | ಕಲುಷಿತ ನೀರು ಸೇವನೆಯಿಂದ 27 ಮಂದಿ ಅಸ್ವಸ್ಥ : ಗ್ರಾಮಕ್ಕೆ ಆರೋಗ್ಯಾಧಿಕಾರಿಗಳು ಭೇಟಿ, ಪರಿಶೀಲನೆ

Update: 2025-06-14 16:13 IST

ರಾಯಚೂರು : ಇಲ್ಲಿನ ಸಿಂಧನೂರು ತಾಲೂಕಿನ ಬೂತಲದಿನ್ನಿ‌ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 27 ಮಂದಿಗೆ ವಾಂತಿ-ಭೇದಿಯಾಗಿದ್ದು, ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೂತಲದಿನ್ನಿ ಗ್ರಾಮದ ಜನರಿಗೆ ಕಳೆದೆರೆಡು ದಿನದಿಂದ ಹೊಟ್ಟೆ ನೋವು ಉಂಟಾಗಿ ವಾಂತಿ-ಭೇದಿಯಾಗುತ್ತಿದ್ದು, 27 ಜನರ ಪೈಕಿ ಈಗಾಗಲೇ 6 ಜನರು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು ಮರಳಿದ್ದಾರೆ. ಇನ್ನಿಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ ಹಾಗೂ ಜಿಲ್ಲಾ ಪಂಚಾಯತ್‌ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ವಿಜಯಲಕ್ಷ್ಮೀ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿ, ರೋಗಿಗಳ ಮನೆ ಮನೆಗೆ ತೆರಳಿ ಸಮಸ್ಯೆ ಆಲಿಸಿದರು.

ವಾಂತಿ-ಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಜನರು ಸೇವಿಸುವ ಕುಡಿಯುವ ನೀರಿನ ಸ್ಯಾಂಪಲ್ ಅನ್ನು ತೆಗೆದುಕೊಂಡು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ನಂತರವೇ ವಾಂತಿ-ಭೇದಿಗೆ ಕಾರಣ ಗೊತ್ತಾಗಲಿದೆ. ಅಲ್ಲದೆ, ವಾಂತಿ-ಭೇದಿಯಿಂದ ಅಸ್ವಸ್ಥರಾದವರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಾ.ಪಂ. ಇಒ ಚಂದ್ರಶೇಖರ್‌ ಮಾಹಿತಿ ನೀಡಿದರು.

ಈ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ ಮಾತನಾಡಿ, ಗ್ರಾಮದಲ್ಲಿರುವ ಉಪ ಪ್ರಾಥಮಿಕ ಆರೋಗ್ಯದಲ್ಲಿ ವಾಂತಿ-ಭೇದಿಯಾದವರಿಗೆ ವೈದ್ಯರು ಪರೀಕ್ಷೆ ಮಾಡುತ್ತಿದ್ದು, ಓಆರ್‌ಎಸ್ ಮತ್ತು ಮಾತ್ರೆಗಳನ್ನು ನೀಡಿದ್ದಾರೆ. ಇಬ್ಬರು ವೈದ್ಯರು, 4 ಜನ ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಅಗತ್ಯ ಸಿಬ್ಬಂದಿಯನ್ನು ನೇಮಿಸಿದ್ದು, ಒಂದು ಆಂಬುಲೆನ್ಸ್ ಹಾಗೂ 5 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ನಿಗಾ ಇಡುತ್ತಿದ್ದು, ಗ್ರಾಮಸ್ಥರು ಆತಂಕ ಪಡಬಾರದು. ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣವೇ ಚಿಕಿತ್ಸೆಗೆ ಆಸ್ಪತ್ರೆಗೆ ಬರಬೇಕೆಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News