ಜೋಳ ಖರೀದಿ ಆರಂಭಿಸಲು ಒತ್ತಾಯಿಸಿ ಸಿಂಧನೂರು ಬಂದ್
ಸಿಂಧನೂರು( ರಾಯಚೂರು): ಜೋಳ ಖರೀದಿ ಆರಂಭಿಸಲು ಒತ್ತಾಯಿಸಿ ರೈತಪರ, ಪ್ರಗತಿಪರ ಸಂಘಟನೆಗಳು ನೀಡಿದ್ದ ಸಿಂಧನೂರು ಬಂದ್ ಕರೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಸೋಮವಾರ ಬೆಳಗ್ಗೆಯಿಂದ ಸಿಂಧನೂರಿನ ವ್ಯಾಪಾರಸ್ಥರು ತಮ್ಮ ಅಂಗಡಿಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಿ ಬಂದ್ ಗೆ ಬೆಂಬಲ ನೀಡಿದರು. ರಸ್ತೆಗಿಳಿದ ಸಾವಿರಾರು ಹೋರಾಟಗಾರರು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿಂಧನೂರು ತಾಲೂಕು ಬಂದ್ ಗೆ ಸಿಪಿಎಂ ಲಿಬರೇಶನ್ ಸೇರಿ ವಿವಿಧ ಪಕ್ಷಗಳು, ಜಮಾಅತೆ ಇಸ್ಲಾಂ ಹಿಂದ್ ಸಿಂಧನೂರು ತಾಲೂಕು ಘಟಕ, ರೈತಪರ, ಕನ್ನಡಪರ, ವರ್ತಕರ, ಗುತ್ತಿಗೆದಾರರ ಸಂಘ, ತಾಲೂಕ ವಕೀಲರ ಸಂಘ, ಗಂಜ್ ವರ್ತಕರು, ಗೊಬ್ಬರ ಅಂಗಡಿಗಳ ಮಾಲಕರು, ಗುತ್ತೆದಾರರ ಸಂಘ, ಪ್ರಗತಿ ಪರ ಸಂಘಟನೆಗಳು ಬೆಂಬಲ ನೀಡಿದವು.
ಪ್ರತಿಭಟನಾನಿರತ ಹೋರಾಟಗಾರರು ಮಾತನಾಡಿ, ರೈತರು ಅನೇಕ ದಿನಗಳಿಂದ ಜೋಳ ಖರೀದಿ ಆರಂಭಿಸಲು ಮನವಿ ಮಾಡಿದರೂ ಸರಕಾರ ಸ್ಪಂದಿಸುತ್ತಿಲ್ಲ. ನಮ್ಮ ಹೋರಾಟ ತೀವ್ರವಾಗುತ್ತಿದ್ದಂತೆ ಸ್ಥಳೀಯ ಜನಪ್ರತಿನಿಧಿಗಳು ಬೆಂಕಿ ಹತ್ತಿಕೊಂಡಾಗ ಬಾವಿ ತೋಡಲು ಹೊರಟಿದ್ದಾರೆ. ಇವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ನಿನ್ನೆ ರೈತರು ಅರೆಬೆತ್ತಲೆ ರಸ್ತೆ ತಡೆ ನಡೆಸಿ, ರಸ್ತೆಯಲ್ಲಿ ಕುಳಿತು ಊಟ ಮಾಡಿ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಕಳೆದ ವಾರ ಇದೇ ರೀತಿ ತಹಶೀಲ್ದಾರ್ ಕಚೇರಿ ಮುಖ್ಯದ್ವಾರದಲ್ಲಿ ಲಾರಿ ನಿಲ್ಲಿಸಿ ಧರಣಿ ನಡೆಸಿದ ಸಮಯದಲ್ಲಿ ಲಿಂಗಸುಗೂರು ಉಪವಿಭಾಗಾಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ ಹಾಗೂ ಪ್ರಭಾರ ತಹಶೀಲ್ದಾರ್ ಶ್ರುತಿ ಬೇಡಿಕೆ ಈಡೇರಿಕೆಗೆ ನಾಲ್ಕು ದಿನಗಳ ಕಾಲಾವಕಾಶ ಕೇಳಿದ್ದರು. ಅದರಂತೆ ರೈತರು ಧರಣಿ ಹಿಂಪಡೆದಿದ್ದರು. ಸರಕಾರ ಇಲ್ಲಿಯವರೆಗೆ ಯಾವುದೇ ತೀರ್ಮಾನ ಕೈಗೊಳ್ಳದೆ ಕಾರಣ ರೈತರು ಆಕ್ರೋಶಗೊಂಡು ರಸ್ತೆಗೆ ಇಳಿದು ಹೋರಾಟ ಆರಂಭಿಸಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ನೋಂದಣಿ ಮಾಡಿಕೊಂಡಿರುವ ರೈತರಿಗೆ ಬೆಂಬಲ ಬೆಲೆಯ ಹಣ ಬಿಡುಗಡೆಯಾಗಿಲ್ಲ. ಹೊಸದಾಗಿ ಜನವರಿಯಲ್ಲಿ ಜೋಳ ಖರೀದಿ ಮಾಡಬೇಕಾಗಿತ್ತು. ಆದರೆ ಸರಕಾರ ಫೆಬ್ರವರಿಯಲ್ಲಿ ನೋಂದಣಿ, ಮೇ ತಿಂಗಳಲ್ಲಿ ಖರೀದಿ ಆರಂಭಿಸಿದೆ. ಇದು ಅಧಿಕಾರಿಗಳ ಲೋಪವೇ ಹೊರತು ರೈತರು ತಪ್ಪಲ್ಲ ಎಂದು ದೂರಿದರು.