ಸಿಂಧನೂರು | ನಗರಸಭೆ ಮಾಜಿ ಅಧ್ಯಕ್ಷ ಜಾಫರ್ ಜಾಹಗೀರ್ ದಾರ್ ನಿವಾಸದಲ್ಲಿ ಮುಸ್ಲಿಂ ಮುಖಂಡರ ಕುಂದು ಕೊರತೆ ಸಭೆ
ರಾಯಚೂರು( ಸಿಂಧನೂರು): ಸಿಂಧನೂರು ನಗರದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಸೈಯದ್ ಜಾಫರ್ ಜಾಹಗೀರ್ ದಾರ್ ಅವರ ನಿವಾಸದಲ್ಲಿ ಬುಧವಾರ ಮುಸ್ಲಿಂ ಮುಖಂಡರ ಕುಂದು ಕೊರತೆ ಸಭೆ ನಡೆಯಿತು.
ಸಭೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆ, ಜಾನುವಾರುಗಳ ಮಾರಾಟ, ಅಲ್ಪಸಂಖ್ಯಾತರ ಸಮಸ್ಯೆ ಹಾಗೂ ಸರ್ಕಾರದ ನಾಮ ನಿರ್ದೇಶನದ ಸ್ಥಾನಮಾನಗಳಲ್ಲಿ ಮುಸ್ಲಿಮರಿಗೆ ಆಗುತ್ತಿರುವ ಅನ್ಯಾಯ ಕುರಿತು ಒಗ್ಗಟ್ಟಿನಿಂದ ಧ್ವನಿ ಎತ್ತುವ ಬಗ್ಗೆ ಚರ್ಚೆ ಮಾಡಲಾಯಿತು.
ಗಂಗಾವತಿ ಮಸ್ಜಿದ್ ನಿರ್ಮಾಣ ವಕ್ಫ್ ದಾಖಲಾತಿಗಳ ಬಗ್ಗೆ, ಸರ್ಕಾರಿ ಶಾಲೆಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಒದಗಿಸುವ ಕುರಿತು ಸಮಾಲೋಚನೆ ನಡೆಸಲಾಯಿತು. ನಗರಸಭೆಯಲ್ಲಿ ಆಗುವಂತಹ ಕೆಲಸಗಳ ಜೊತೆಗೆ ಸಮಾಜಕ್ಕೆ ಆಗುತ್ತಿರುವ ರಾಜಕೀಯ ಅನ್ಯಾಯದ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
ಸಮಾಜದವರೆಲ್ಲರೂ ಒಟ್ಟಾಗಿ ರಾಜಕೀಯದ ಅಧಿಕಾರದ ಅವಕಾಶ ಪಡೆಯಲು ಸಜ್ಜಾಗಬೇಕಿದೆ. ಅನ್ಯಾಯದ ವಿರುದ್ದ ಧ್ವನಿಎತ್ತಿ ನಮ್ಮ ಹಕ್ಕು ಪಡೆಯಲು ಐಕ್ಯವಾಗಿ ಹೋರಾಡೋಣ ಎನ್ನುವ ಒಮ್ಮತದ ನಿರ್ಧಾರ ಮಾಡಲಾಯಿತು ಎಂದು ಸಭೆಯಲ್ಲಿದ್ದ ಮುಖಂಡರು ತಿಳಿಸಿದರು.
ಸಭೆಯಲ್ಲಿ ವಿವಿಧ ಮಸ್ಜಿದ್ ಗಳ ಮೌಲ್ವಿಗಳು, ನಗರಸಭೆ ಸದಸ್ಯ ಮುರ್ತುಜಾಹುಸೇನ್, ಮುಖಂಡರಾದ ಎಂ.ಡಿ.ನದೀಮುಲ್ಲಾ, ಇಲಿಯಾಸ್, ರಫೀಕ್ ಅಹ್ಮದ್, ಅಕ್ತರ್ ಸೇರಿದಂತೆ ವಿವಿಧ ಸಮಾಜದ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.