×
Ad

ಸಿಂಧನೂರು | ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ನಗರಸಭೆ ಅಧ್ಯಕ್ಷ ಸ್ಥಾನ ತೊರೆದ ಪ್ರಿಯಾಂಕ

Update: 2025-04-18 18:52 IST

ರಾಯಚೂರು : ಸರ್ಕಾರಿ ಹುದ್ದೆಯಲ್ಲಿ ಇದ್ದವರು ರಾಜಕೀಯಕ್ಕೆ ಬರಲು ತಮ್ಮ ಹುದ್ದೆ ತ್ಯಾಜಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಗ್ರಾಮ ಪಂಚಾಯತ್‌ ಅಧ್ಯಕ್ಷೆ ರಾಜಕೀಯ ತೊರೆದು ಸರ್ಕಾರಿ ಹುದ್ದೆಗೆ ಏರಿದ ಅಪರೂಪದ ಘಟನೆ ಸಿಂಧನೂರಿನಲ್ಲಿ ನಡೆದಿದೆ.

ಜಿಲ್ಲೆಯ ಸಿಂಧನೂರು ನಗರಸಭೆ ಅಧ್ಯಕ್ಷೆ ಪ್ರಿಯಾಂಕ ಅವರು ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ.

ಸರಕಾರಿ ಹುದ್ದೆಯ ನಿರೀಕ್ಷೆಯಲ್ಲಿದ್ದ ಪ್ರಿಯಾಂಕ ಅವರಿಗೆ ನೇಮಕಾತಿ ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರು ಬಂದ ಹಿನ್ನಲೆಯಲ್ಲಿ ನಗರಸಭಾಧ್ಯಕ್ಷೆ ಸ್ಥಾನಕ್ಕೆ ಪ್ರಿಯಾಂಕ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ನಗರಸಭೆ ಅಧ್ಯಕ್ಷ ಅದೃಷ್ಟವೆಂಬಂತೆ ಪ್ರಿಯಾಂಕ ಅವರಿಗೆ ಒಲಿದಿತ್ತು. ನಗರಸಭೆ ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಾಗಿದ್ದರಿಂದ ಏಕಮಾತ್ರ ಸದಸ್ಯೆಯಾಗಿರುವ ಪ್ರಿಯಾಂಕ ರೋಹಿತ್ ಅವರು ಫೆ.13ರಂದು ನಗರಸಭೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಜೆಡಿಎಸ್ ಬಿ ಫಾರಂ ನಲ್ಲಿ ಸ್ಪರ್ಧಿಸಿ ಗೆದ್ದಿದ್ದರೂ, ಕಾಂಗ್ರೆಸ್ ಬೆಂಬಲದೊಂದಿಗೆ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಆದರೆ ಈಗ ಸರ್ಕಾರಿ ಹುದ್ದೆ ಅವರಿಗೆ ಒಲಿದು ಬಂದ ಹಿನ್ನಲೆಯಲ್ಲಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಜಿಲ್ಲಾಧಿಕಾರಿಗಳಿಗೆ ಪತ್ರ ರವಾನಿಸಿದ್ದಾರೆ.

ಎಂಜನೀಯರ್ ಪದವಿ ಅರ್ಹತೆ ಹೊಂದಿರುವ ಪ್ರಿಯಾಂಕ ಅವರು 2017ರಲ್ಲಿ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿ, ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದರು. ಇದೀಗ ಆ ಹುದ್ದೆಯ ನೇಮಕಾತಿಯ ಆದೇಶದಲ್ಲಿ ಅವರ ಹೆಸರು ಬಂದಿದ್ದು, ಹೀಗಾಗಿ ಸರ್ಕಾರಿ ಹುದ್ದೆಗಾಗಿ ನಗರಸಭೆ ಅಧ್ಯಕ್ಷೆ ಸ್ಥಾನವನ್ನು ತ್ಯಾಗ ಮಾಡಲು ಹೊರಟಿದ್ದು, ವಿಶೇಷವಾಗಿದೆ.

ಉಪಾಧ್ಯಕ್ಷೆಗೆ ಹಂಗಾಮಿ ಅಧ್ಯಕ್ಷ ಸ್ಥಾನ :

ಸದ್ಯ ಪ್ರಿಯಾಂಕ ಅವರು ತಮ್ಮ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ನಗರಸಭೆ ಆಡಳಿತ ಮಂಡಳಿ‌‌ ಮುನ್ನಡೆಸಲು ಉಪಾಧ್ಯಕ್ಷೆಯಾಗಿರುವ ಮಂಜುಳಾ ಪ್ರಭುರಾಜ್ ಅವರಿಗೆ ಹಂಗಾಮಿ ಅಧ್ಯಕ್ಷ ಸ್ಥಾನ ಸಿಗಬಹುದು ಎಂದು ಹೇಳಲಾಗುತ್ತಿದೆ. ಇನ್ನೂ 6 ತಿಂಗಳು ಮಾತ್ರ ಆಡಳಿತ ಮಂಡಳಿಯ ಅಧಿಕಾರವಧಿ ಇದ್ದು, ಮುಂದೆ ಏನಾಗಬಹುದು ಎಂದು ಹೇಳಲಾಗದು.

ಅದೇನೆ ಇರಲಿ ರಾಜಕೀಯವನ್ನು ಬದಿಗಿರಿಸಿ ಸರ್ಕಾರಿ ಹುದ್ದೆ ಅಲಂಕರಿಸುವ ಪ್ರಿಯಾಂಕ ನಡೆ ಹಲವರ ಅಚ್ಚರಿಗೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News