ಸಿಂಧನೂರು | ಅತಿಥಿ ಉಪನ್ಯಾಸಕರನ್ನು ನೇಮಿಸಲು ಸರಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಂದ ಪ್ರತಿಭಟನೆ
ಸಿಂಧನೂರು : ನಗರದ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರು ಪೂರ್ಣಕಾಲಿಕವಾಗಿ ಇಬ್ಬರೆ ಇದ್ದು, ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ ಎಂದು ವಿದ್ಯಾರ್ಥಿನಿಯರು ದಿಢೀರ್ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿದರು.
ಈಗಾಗಲೇ ಒಂದು ತಿಂಗಳು ಕಳೆಯುತ್ತಾ ಬಂದರೂ ಸಹ ಸರ್ಕಾರ ಅತಿಥಿ ಉಪನ್ಯಾಸಕರನ್ನು ನೇಮಿಸದೆ ಇರುವುದರಿಂದ ಶೈಕ್ಷಣಿಕವಾಗಿ ತೊಂದರೆಯಾಗುತ್ತಿದ್ದು, ಈ ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಯಾವುದೇ ಸಬೂಬ್ ಹೇಳದೆ ಕ್ರಮ ಕೈಗೊಳ್ಳಬೇಕೆಂದು ಕಾಲೇಜಿನ ಪ್ರಾಂಶುಪಾಲರಾದ ಮಹಾಂತಪ್ಪ ಕೊಡಗಲಿ ಅವರಿಗೆ ವಿದ್ಯಾರ್ಥಿನಿಯರು ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ವಿದ್ಯಾರ್ಥಿನಿಯರಾದ ಶ್ರೀದೇವಿ ಮುರಳಿ, ಶಿಲ್ಪಾ, ಲಕ್ಷ್ಮಿ, ಶ್ವೇತಾ ಮನವಿ ಪತ್ರ ಓದುವ ಮೂಲಕ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ, ಬೀದಿಗೆ ಇಳಿದು ಪ್ರತಿಭಟನೆ ರೂಪಿಸಲಾಗುವುದು ಎಂದು ಕರೆ ನೀಡಿ, ಎಚ್ಚರಿಕೆ ನೀಡಿದರು.
ಮಹಿಳಾ ಕಾಲೇಜಿನ ಅನೇಕ ವಿದ್ಯಾರ್ಥಿನಿಯರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.