ಸಿಂಧನೂರು | ದಲಿತ ಮಹಿಳೆಯರ ಬಗ್ಗೆ ಹೇಳಿಕೆ : ಯತ್ನಾಳರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲು ಸಿಪಿಐ(ಎಂಎಲ್) ಆಗ್ರಹ
ಸಿಂಧನೂರು : ವಿಜಯಪುರ ಶಾಸಕರಾದ ಬಸವನಗೌಡ ಯತ್ನಾಳ್ ಅವರು ದಲಿತ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ, ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಬಂಧಿಸಬೇಕು ಎಂದು ಸಿಪಿಐ(ಎಂಎಲ್) ಲಿಬರೇಶನ್ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಪ್ರತಿಭಟನಾಕಾರರು ತಹಶೀಲ್ದಾರ್ ಮುಖಾಂತರ ರಾಜ್ಯಪಾಲರು ಹಾಗೂ ವಿಧಾನಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಸಿಪಿಐ(ಎಂಎಲ್) ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಪೂಜಾರ್ ಮಾತನಾಡಿ, ಸಾರ್ವಜನಿಕವಾಗಿ ಅಸ್ಪೃಶ್ಯತೆ ಆಚರಿಸಿ, ದಲಿತ ಸಮುದಾಯವನ್ನು ಅವಮಾನಿಸಿರುವ ಯತ್ನಾಳ್ ಅವರ ವರ್ತನೆ ಶಿಕ್ಷಾರ್ಹ ಅಪರಾಧ. ಇತ್ತೀಚಿನ ದಿನಗಳಲ್ಲಿ ಅವರು ಹಲವು ಕಡೆ ದ್ವೇಷ ಭಾಷಣ ಮಾಡಿ ಸಮಾಜದಲ್ಲಿ ಅಶಾಂತಿ ಉಂಟುಮಾಡಿದ್ದಾರೆ. ಇನ್ನೂ ಕ್ರಮ ಕೈಗೊಳ್ಳದಿರುವುದು ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಕುಂದಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ ಮಾತನಾಡಿ, ಸಂವಿಧಾನ ಕಾಲಂ 15 ಪ್ರಕಾರ ಧರ್ಮ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ನಿಷೇಧಿಸಲಾಗಿದೆ. ಆದರೆ ಯತ್ನಾಳ್ ಅವರು ದಲಿತ ಮಹಿಳೆಯರಿಗೆ ಜಾತಿ ನಿಂದನೆ ಮಾಡಿದ್ದಾರೆ. ಇವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿರುಪಮ್ಮ ಉದ್ಬಾಳ ಜೆ. ಮಾತನಾಡಿದರು.
ಪ್ರತಿಭಟನೆಯಲ್ಲಿ ಡಿಎಸ್‌ಎಸ್ ಸಂಚಾಲಕ ಮಂಜುನಾಥ ಗಾಂಧಿನಗರ, ಸಿಪಿಐ(ಎಂಎಲ್) ಮುಖಂಡರಾದ ಆರ್.ಎಚ್. ಕಲಮಂಗಿ, ಯಮನೂರಪ್ಪ, ಹುಸೇನಪ್ಪ ಅರಳಹಳ್ಳಿ, ಬಸವರಾಜ, ದೇವಪ್ಪ ಅರಳಹಳ್ಳಿ, ರಮೇಶ ಅರಳಹಳ್ಳಿ, ಮಹಿಳಾ ಮುಖಂಡರಾದ ಇಂದ್ರಮ್ಮ, ಶಾಂಭವಿ ಸೇರಿದಂತೆ ಅನೇಕರು ಭಾಗವಹಿಸಿದರು.