×
Ad

ರಾಜ್ಯ ಸರಕಾರ ರೈತರ ಸಮಸ್ಯೆಗೆ ಕಿವಿಗೊಡುತ್ತಿಲ್ಲ : ನಿಖಿಲ್ ಕುಮಾರಸ್ವಾಮಿ ಆಕ್ರೋಶ

Update: 2025-06-26 22:14 IST

ರಾಯಚೂರು( ಸಿಂಧನೂರು): ರಾಜ್ಯ ಸರ್ಕಾರ ರೈತರ, ಸಮಸ್ಯೆಗಳನ್ನು ಬಗೆಹರಿಸದೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಜೆಡಿಎಸ್ ವರಿಷ್ಠರು, ಕಾರ್ಯಕರ್ತರು ಪಕ್ಷ ಬಲಪಡಿಸಿ ಜನರ ಧ್ವನಿಯಾಗಿ ಬೀದಿಗಿಳಿದು ಹೋರಾಟ ಮಾಡಬೇಕಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಜೆಡಿಎಸ್ ಪಕ್ಷದಿಂದ ನಡೆಯುತ್ತಿರುವ ‘ಜನರೊಂದಿಗೆ ಜನತಾದಳ’ ಪ್ರಚಾರಾಂದೋಲನದ ಭಾಗವಾಗಿ ಸಿಂಧನೂರು ತಾಲೂಕಿನ ಹೊರವಲಯದ ಯಲಿಮಂಚಾಲಿ ವಾಸುದೇವರಾವ್ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಯಚೂರು ಜಿಲ್ಲೆಗೆ ನೀರಾವರಿ ಸೌಲಭ್ಯ ಒದಗಿಸಿದ ಮಾಜಿ ಪ್ರಧಾನಿ ದೇವೆಗೌಡರ ಕೊಡುಗೆ ಅಪಾರವಾಗಿದೆ. ಹೀಗಾಗಿ ಅವರಿಗೆ ದೊಡ್ಡ ಅಭಿಮಾನ ಬಳಗವಿದೆ. ಮಾಜಿ‌ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೂ ಕೂಡ ಎರೆಡು ಬಾರಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

ಜಿಲ್ಲೆಯ ಜೆಡಿಎಸ್ ನಾಯಕರ, ಕಾರ್ಯಕರ್ತರ ನಿಸ್ವಾರ್ಥ ಸೇವೆಯಿಂದ ಇದು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಗೆ ಪೂರ್ಣಾವಧಿ ಅಧಿಕಾರ ನೀಡಿದರೆ ಮತ್ತಷ್ಟು ಅಭಿವೃದ್ಧಿ ಆಗಲಿದೆ. ಇದು ರೈತರ, ಮಹಿಳೆಯರ ಆಶಯವೂ ಆಗಿದೆ. ಕಲ್ಯಾಣ ಕರ್ನಾಟಕದ ಭಾಗದ ಸಮಗ್ರ ಅಭಿವೃದ್ಧಿಗೆ ಜೆಡಿಎಸ್ ಪಕ್ಷ ಬದ್ಧವಾಗಿದೆ.‌ ಕಾರ್ಯಕರ್ತರು ಪಕ್ಷವನ್ನು ಬೇರು ಮಟ್ಟದಿಂದ ಬೆಳೆಸಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮೊದಲು ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರು ತೆರೆದ ವಾಹನದಲ್ಲಿ ಬೃಹತ್ ರೋಡ್ ಶೋ ನಡೆಸಿದರು. ರೋಡ್‌ಶೋ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ, ಬೈಕ್ ರ‍್ಯಾಲಿ ನಡೆಯಿತು.

ಸ್ಥಳೀಯರು ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ರೋಡ್ ಶೋನಲ್ಲಿ ಜೆಡಿಎಸ್ ಪರ ಘೋಷಣೆಗಳು ಮೊಳಗಿದವು. ಗಂಗಾವತಿ ಮಾರ್ಗದ ಯಲಿಮಂಚಾಲಿ ವಾಸುದೇವರಾವ್ ಕಲ್ಯಾಣಮಂಟಪದವರೆಗೂ ರೋಡ್ ಶೋ ನಡೆಯಿತು.

ರೋಡ್ ಶೋನಲ್ಲಿ ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ್ ನಾಯ್ಕ್ , ಮಾನ್ವಿಯ ಮಾಜಿ ಶಾಸಕ ವೆಂಕಟಪ್ಪ ನಾಯಕ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News