ರಾಯಚೂರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಅಂಶಗಳ ಶಿಪಾರಸ್ಸಿಗೆ ಸಲಹೆ
ರಾಯಚೂರು : ಆರ್ಥಿಕ ತಜ್ಞರಾದ ಪ್ರೊ.ಎಂ.ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸದಸ್ಯರಾದ ಎಸ್.ಟಿ.ಬಾಗಲಕೋಟೆ ಮತ್ತು ಸಂಗೀತಾ ಕೆ.ಎನ್. ಅವರನ್ನೊಳಗೊಂಡ ಸಮಿತಿಯು ಮೇ 6ರಂದು ರಾಯಚೂರು ಜಿಲ್ಲೆಗೆ ಭೇಟಿ ನೀಡಿದರು.
ಈ ಸಮಿತಿಯು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೇ 6ರಂದು ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಂವಾದ ಸಭೆಯಲ್ಲಿ ಪರಿಶಿಷ್ಟ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಸೇರಿದಂತೆ ರಾಯಚೂರು ನಗರದ ವಿವಿಧ ಸಂಘಟನೆಗಳು ಪ್ರಮುಖರು, ರೈತ ಹೋರಾಟಗಾರರು, ವಿದ್ಯಾರ್ಥಿ-ಯುವಜನ ಸಂಘಟನೆಗಳ ಮುಖಂಡರು ಸೇರಿದಂತೆ ಅನೇಕರು ಭಾಗಿಯಾಗಿ ಸಮಿತಿಗೆ ಹತ್ತಾರು ಸಲಹೆಗಳನ್ನು ನೀಡಿದರು.
ಬೆಳಗ್ಗೆ 11 ಗಂಟೆಗೆ ಆರಂಭವಾದ ಸಭೆಯು ಮಧ್ಯಾಹ್ನ ಸುಮಾರು 2.20 ರವರೆಗೆ ನಿರಂತರವಾಗಿ ನಡೆಯಿತು. ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ನಗರದ ವಿವಿಧ ಸಂಘಟನೆಗಳ ಪ್ರಮುಖರು ಮತ್ತು ಇನ್ನೀತರರು ಒಬ್ಬೊಬ್ಬರಾಗಿ ಮಾತನಾಡಿ ಹಲವಾರು ಸಲಹೆಗಳನ್ನು ಸಮಿತಿಗೆ ನೀಡಿದರು.
ಶಾಸಕರಾದ ಬಸನಗೌಡ ದದ್ದಲ್ ಅವರು ಮಾತನಾಡಿ, ಅಧಿವೇಶನದಲ್ಲಿ ನಿರಂತರ ಪ್ರಶ್ನೆಗಳನ್ನು ಹಾಕಿದ ಬಳಿಕ ಡಾ.ಡಿ.ಎಂ.ನಂಜುಂಡಪ್ಪ ವರದಿ ನಂತರ ಈ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯನ್ನು ರಚಿಸಲಾಗಿದೆ. ನಂಜುಂಡಪ್ಪ ವರದಿಯಲ್ಲಿ ಈ ಭಾಗ ಹಿಂದುಳಿದಿದೆ ಎಂದು ತಿಳಿಸಿದ್ದರೂ, ಸಹ ಸೂಕ್ತ ಅನುದಾನ ಸಿಗದೇ ನಮಗೆ ಅನ್ಯಾಯವಾಗಿದೆ. ನಮ್ಮಲ್ಲಿ ಪದವಿ ಕಾಲೇಜುಗಳು ಕಡಿಮೆ ಇವೆ. ತುಂಗಭದ್ರಾ ಕೃಷ್ಣಾ ಕಾಲುವೆಗಳಿದ್ದರೂ ನಮಗೆ ಸರಿಯಾದ ನೀರಿನ ಸೌಕರ್ಯವಿಲ್ಲ. ನಾವೇ ವಿದ್ಯುತ್ ಉತ್ಪಾದನೆ ಮಾಡಿದರೂ, ನಮಗೆ ಸಮರ್ಪಕ ವಿದ್ಯುತ್ ಸಿಗುತ್ತಿಲ್ಲ. ಈ ಭಾಗದಲ್ಲಿ ಪ್ರತಿ ವರ್ಷ 50 ಸಾವಿರ ಜನರು ಗುಳೆ ಹೋಗುತ್ತಾರೆ ಎನ್ನುವ ಮಾಹಿತಿ ಇದೆ. ಅತಿಥಿ ಶಿಕ್ಷಕರ ಮೇಲೆಯೇ ಶಾಲೆಗಳು ನಡೆಯುತ್ತಿವೆ. ಪರಿಸರ ಸ್ನೇಹಿ ಕೈಗಾರಿಕೆಗಳ ಸ್ಥಾಪನೆಗೆ ಎಷ್ಟೇ ಜಾಗ ಕೇಳಿದರು ಕೊಡುತ್ತೇವೆ. ಈ ಭಾಗದ ಜನರಲ್ಲಿ ಹೆಚ್ಚಿರುವ ಅಪೌಷ್ಠಿಕತೆಯು ನಿವಾರಣೆಯಾಗಬೇಕು. ಈ ಎಲ್ಲ ಅಂಶಗಳನ್ನು ಸಮಿತಿಯು ಶಿಪಾರಸ್ಸಿನಲ್ಲಿ ಅಳವಡಿಸಬೇಕು. ಸಮಯ ತೆಗೆದುಕೊಂಡು ಗ್ರಾಮ ಪಂಚಾಯತಿಗಳಿಗೆ ಸಹ ಭೇಟಿ ನೀಡಿ ವಾಸ್ತವವಾಂಶ ಅರಿಯಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಮಾತನಾಡಿ, ಆರ್‌ಟಪಿಎಸ್, ವೈಟಿಪಿಎಸ್ ಮತ್ತು ರೈಸ್‌ಮಿಲ್‌ಗಳಿದ್ದರೂ ರಾಯಚೂರು ಜಿಲ್ಲೆ ಯಾಕೆ ಹಿಂದುಳಿದಿದೆ ಎಂಬುದರ ಬಗ್ಗೆ ಗಂಭೀರ ಚಿಂತನೆ ಮಾಡಬೇಕು. ಮುಖ್ಯವಾಗಿ ಆದಾಯವು ಎಲ್ಲರಿಗೂ ಸರಿ ಪ್ರಮಾಣದಲ್ಲಿ ಹಂಚಿಕೆಯಾಗಬೇಕು. 371 ಜೇ ಮೀಸಲು ಪಡೆದು ಆಯ್ಕೆಯಾದವರು ಕನಿಷ್ಟ 10 ವರ್ಷಗಳ ಕಾಲವಾದರು ಈ ಪ್ರದೇಶದಲ್ಲಿಯೇ ಸೇವೆ ಸಲ್ಲಿಸುವಂತಾಗಬೇಕು. ಲೊಕಸೇವಾ ಆಯೋಗ, ಪರೀಕ್ಷಾ ಪ್ರಾಧಿಕಾರ ನಡೆಸುವ ಪರೀಕ್ಷೆಗಳಲ್ಲಿ ಪಾಸುಗುವವರ ಸಂಖ್ಯೆ ರಾಯಚೂರು ಜಿಲ್ಲೆಯಿಂದ ಕಡಿಮೆ ಇದೆ. ಖಾಲಿ ಹುದ್ದೆಗಳ ಸಂಖ್ಯೆ ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗೆ ಹೋಲಿಸಿದರೆ ರಾಯಚೂರು ಜಿಲ್ಲೆಯಲ್ಲಿ ಕಡಿಮೆ ಇದೆ. ನುರಿತ ಶಿಕ್ಷಕರು, ಅಧಿಕಾರಿಗಳು, ವೈದ್ಯರು, ನೌಕರರು ಇದ್ದಾಗ ಮಾತ್ರ ಕೆಕೆಆರ್‌ಡಿಬಿ ನೀಡುವ ಅನುದಾನ ಸದ್ಬಳಕೆಯಾಗಲು ಸಾಧ್ಯ. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರನ್ನ ಮೇಲೆತ್ತಿದ್ದಾಗ ಮಾತ್ರ ನಾವು ಮೇಲೆ ಬರಲು ಸಾಧ್ಯಾಗುತ್ತದೆ. ಎಸ್ಸಿ ಎಸ್ಟಿ ಜನರ ಆರ್ಥಿಕ ಪರಿಸ್ಥಿತಿಯ ಅಧ್ಯಯನ ಆಗಬೇಕು. ಸಮಿತಿಯು ಈ ಅಂಶಗಳನ್ನು ಪರಿಗಣಿಸಬೇಕು ಎಂದು ತಿಳಿಸಿದರು.
ಹೋರಾಟಗಾರರಾದ ಬಸವರಾಜ ಕಳಸ, ಚಿಂತಕರಾದ ತ್ರಿವಿಕ್ರಮ ಜೋಶಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಅಬ್ದುಲ್ ಮಾಜಿದ್, ಯುವ ಹೋರಾಟಗಾರರಾದ ಜೈಭೀಮ ಅವರು ಮಾತನಾಡಿರು.
ಗಣ್ಯರಿಂದ ಸಲಹೆಗಳನ್ನು ಕೇಳಿದ ಬಳಿಕ ಸಮಿತಿಯ ಸದಸ್ಯರಾದ ಎಸ್.ಟಿ.ಬಾಗಲಕೋಟೆ ಅವರು ಮಾತನಾಡಿ, ಡಾ.ಡಿ.ಎಂ.ನಂಜುಂಡಪ್ಪ ವರದಿಯ ಅನುಷ್ಠಾನದಿಂದ ತಾಲೂಕುಗಳು ಅಭಿವೃದ್ಧಿ ಹೊಂದಿರುವ ಬಗ್ಗೆ ಹಾಗೂ ಅಭಿವೃದ್ಧಿ ಹೊಂದದೇ ಇರುವ ತಾಲೂಕುಗಳನ್ನು ಗುರುತಿಸಿ ಹೊಸದಾಗಿ ಸೂಚ್ಯಾಂಕವನ್ನು ಕಂಡು ಹಿಡಿದು ಪ್ರಾದೇಶಿಕ ಅಸಮತೋಲನವನ್ನು ನಿವಾರಣೆ ಮಾಡಲು ರಾಜ್ಯ ಸರ್ಕಾರವು ಈ ಸಮಿತಿಯನ್ನು ರಚಿಸಿದೆ. ಈ ಪ್ರಾದೇಶಿಕ ಅಸಮತೋಲನ ಸಮಿತಿಯು ಅಸಮತೋಲನ ನಿವಾರಿಸಲು ಕೆಲವು ಮುಖ್ಯ ಅಂಶಗಳನ್ನು ಸರಕಾರಕ್ಕೆ ಶಿಫಾರಸ್ಸು ಮಾಡಲಿದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಶೋಕ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕಾರಾಂ ಪಾಂಡ್ವೆ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಡಾ.ಟಿ.ರೋಣಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಜಯಪ್ರಕಾಶ್, ಕೈಗಾರಿಕಾ ಇಲಾಖೆಯ ಅಧಿಕಾರಿ ಬಸವರಾಜ ಯರಕಂಚಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಬಿ.ಬಡಿಗೇರ, ಯುವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕರಾದ ವೀರೇಶ ನಾಯಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.