ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಿಂಧನೂರಿನಲ್ಲಿ ಮಹಿಳೆಯರಿಂದ ಪ್ರತಿಭಟನೆ
ರಾಯಚೂರು: ವಕ್ಫ್ (ತಿದ್ದುಪಡಿ) ಕಾಯ್ದೆ 2025 ರದ್ದು ಪಡಿಸಲು ಒತ್ತಾಯಿಸಿ ಜಮಾಅತೆ ಇಸ್ಲಾಮಿ ಹಿಂದ್ ಸಿಂಧನೂರು ಘಟಕ, ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ನೇತೃತ್ವದಲ್ಲಿ ಸಿಂಧನೂರು ತಾಲೂಕಿನಲ್ಲಿ ಪ್ರತಿಭಟನೆ ನಡೆಯಿತು.
ನಗರದ ಪಟೇಲ್ ವಾಡಿಯ ಮಸ್ಜಿದ್ ಎ ಹುದಾದಿಂದ ಕನಕದಾಸ ವೃತ್ತದ ಮಾರ್ಗವಾಗಿ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ವಿಧಿಯು ಭಾರತದ ಸಂವಿಧಾನದ 14, 25, 26 ಮತ್ತು 29 ನೇ ವಿಧಿಗಳ ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ವಕ್ಫ್‌ನಿಂದ ಹಣಕಾಸು ನೆರವು ಪಡೆಯುತ್ತಿರುವ ಮಸೀದಿಗಳು, ಮದರಸಗಳು, ಅನಾಥಾಶ್ರಮಗಳು, ಆಸ್ಪತ್ರೆಗಳು ಮತ್ತು ಇತರ ಅಗತ್ಯ ಸಂಸ್ಥೆಗಳ ರಕ್ಷಣೆಯನ್ನು ದುರ್ಬಲಗೊಳಿಸುತ್ತದೆ. ವಿವಾದ ಪರಿಹಾರವು ಈಗ ಸರ್ಕಾರದಿಂದ ಗೊತ್ತುಪಡಿಸಿದ ಅಧಿಕಾರಿಗಳಿಗೆ ಅಸಮಾನವಾಗಿ ಅನುಕೂಲಕರವಾಗಿರುವುದರಿಂದ, ಅತಿಕ್ರಮಣ ಮತ್ತು ಅಧಿಕಾರದ ಕೇಂದ್ರೀಕರಣವನ್ನು ಪ್ರೋತ್ಸಾಹಿಸುತ್ತದೆ ಎಂದು ದೂರಿದರು.
ಈ ವೇಳೆ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಷನ್ (ಜಿಐಒ) ಸಿಂಧನೂರು ಘಟಕದ ಅಧ್ಯಕ್ಷೆ ನೇಹಾ ಸಮ್ರೀನ್, ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಸದಸ್ಯೆ ಉಮ್ಮೆಕುಲ್ಸುಂ, ಶಹನಾಝ್ ಬೇಗಂ, ಸೈಯದಾ ಬೇಗಂ, ಖಮರ್ ಸುಲ್ತಾನ್, ಅತಿಯಾ ಫೌಝಿಯಾ, ರಿಝ್ವಾನ ಬೇಗಂ, ಲುಬ್ನಾ ಬೆಳಗಾಮಿ, ಅರ್ಶಿಯಾ ಮತೀನ, ತಹೆಸೀನ್ ಪರ್ವಿನ್, ಅಸ್ಮಾ ಖಾನಂ, ಶಾಜಿಯಾ, ಜಮಾತೆ ಇಸ್ಲಾಂ ಹಿಂದ್ ಸಿಂಧನೂರು ತಾಲೂಕು ಘಟಕದ ಅಧ್ಯಕ್ಷ ಮುಹಮ್ಮದ್ ಹುಸೇನ್, ಶರ್ಫುದ್ದೀನ ಸಾಬ, ದಿಲಾವರ್ ಅಂಬರ್ ಖಾನ್, ಮಹೆಬೂಬ ಖಾನ್, ವಸಿಂ, ಇಮ್ತಿಯಾಜ್ ಸೇರಿದಂತೆ ಮಹಿಳೆಯರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.