×
Ad

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಸರಕಾರದಿಂದ ಜಾತಿ ಸಮೀಕ್ಷೆ : ಯತೀಂದ್ರ ಸಿದ್ದರಾಮಯ್ಯ

Update: 2025-10-12 19:25 IST

ರಾಯಚೂರು : ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಅಪಪ್ರಚಾರ ಹೆಚ್ಚಾಗಿ ಕೇಳಿ ಬರುತ್ತಿದೆ. ಸಮೀಕ್ಷೆಯಿಂದ ಸಮಾಜವನ್ನು ಒಡೆಯಲಾಗುತ್ತಿದೆ ಎಂದು ಅನೇಕರು ಅಪಪ್ರಚಾರ ಮಾಡುತ್ತಿದ್ದಾರೆ. ಸಮಾಜದಲ್ಲಿರುವ ಪ್ರತಿಯೊಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅವರಿಗೆ ಶಕ್ತಿ ತುಂಬಲು ಸಮೀಕ್ಷೆ ನೆರವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.  

ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕೆಸಿಬಿ ಅಂಡ್ ಸನ್ಸ್‌ ಕೆ.ಆಯ್ಯಣ್ಣ ವಡವಾಟಿ ಹಾಗೂ ಜಿಲ್ಲಾ ಕನಕ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿಂದುಳಿದ ವರ್ಗಗಳ ಸಮಾಜದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗುತ್ತಿಲ್ಲ ಎಂದು ಅನೇಕ ವರ್ಷಗಳಿಂದ ಅಸಮಾಧಾನವಿದ್ದು ಪರಸ್ಪರ ಕಚ್ಚಾಡುವಂತಾಗಿದೆ. ಶೇ 50 ರಷ್ಟು ಇರುವ ಮೀಸಲಾತಿಯ ಮಿತಿಯನ್ನು ‌ಹೆಚ್ಚಿಸಬೇಕು ಎಂಬ ಒತ್ತಾಯವಿದ್ದು ಇದನ್ನು ಮಾಡಿದರೆ ಎಲ್ಲರಿಗೂ ತಮ್ಮದೇ ಆದ ಪಾಲು ಸಿಗಬಹುದು. ಇದಕ್ಕೆ ಯಾವ ಸಮುದಾಯ ಎಷ್ಟಿದೆ ಎನ್ನುವುದು ತಿಳಿಯಲು ಜಾತಿ ಸಮೀಕ್ಷೆ ಸಹಕಾರಿಯಾಗಲಿದೆ ಎಂದರು.

ಸಮೀಕ್ಷೆಯ ಕುರಿತು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೇ ಸಮೀಕ್ಷೆಗೆ ಪ್ರತಿಯೊಬ್ಬರು ಬೆಂಬಲಿಸಬೇಕು. ಕಾಂಗ್ರೆಸ್ ಪಕ್ಷ ಎಂದಿಗೂ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕೆಲಸ ಮಾಡುತ್ತದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿದ್ದು, ಅದರಲ್ಲೂ ಮಹಿಳೆಯರನ್ನು ಬಲಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಇದೆ ವೇಳೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹವಾಗಿದ್ದು, ಇಂತಹ ಕಾರ್ಯಕ್ರಮಗಳಿಂದ ಮಕ್ಕಳ ಭವಿಷ್ಯ ರೂಪಗೊಳ್ಳುತ್ತವೆ. ಸಿಎಂ ಸಿದ್ದರಾಮಯ್ಯ ಅವರು 2013ರಿಂದ 2018ರವರೆಗೆ 160 ಭರವಸೆಗಳನ್ನು ಈಡೇರಿಸಿದ್ದಾರೆ. ಸಮಾಜದ ಮಕ್ಕಳು ಉತ್ತಮವಾಗಿ ಅಭ್ಯಾಸ ಮಾಡಿ ಮುಂದೆ ಬರಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಟಮಾರಿ ಶಿವಾನಂದ ಮಠದ ಶ್ರೀವಜ್ಞಾನಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕೆ.ಸಿ.ಬಿ ಆಂಡ್ ಸನ್ಸ್‌ನ ಕೆ.ಅಯ್ಯಣ್ಣ ವಡವಾಟಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ನಿಕೇತರಾಜ್.ಎಂ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ನಿರ್ದೇಶಕ ರಾಮಕೃಷ್ಣ ರೊಳೆ, ರಾಜ್ಯ ಪ್ರದೇಶ ಕುರುಬ ಸಂಘದ ಅಧ್ಯಕ್ಷ ಎಂ.ಈರಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಶರಣಪ್ಪ ಮಟ್ಟೂರು, ಶ್ರೀದೇವಿ ನಾಯಕ, ಕೆ.ಬಸವಂತಪ್ಪ, ಕೆ.ಕರಿಯಪ್ಪ, ಆನಂದ ಬಂದ್ರಕಳ್ಳಿ, ಗಂಗಾಧರ, ಶ್ರೀದೇವಿ, ಜಿ.ಯು.ಹುಡೇದ, ಮಹಾದೇವಪ್ಪ ಮಿರ್ಜಾಪೂರ, ನಾಗವೇಣಿ ಪಾಟೀಲ್, ಅಶೋಕ್.ಬಿ, ಚಾಮುಂಡಿ, ಚಂದ್ರಶೇಖರ, ನಾಗರಾಜ ಮಡ್ಡಿಪೇಟೆ, ಮಂದಕಲ್ ಬಾಬು, ಬಜಾರಪ್ಪ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News