ವಿತ್ತ ಮಾರುಕಟ್ಟೆ ಅವಧಿ ಸಂಜೆ 7ರವರೆಗೆ ವಿಸ್ತರಣೆಗೆ ಆರ್‌ಬಿಐ ನಿಯೋಗ ಒಲವು
PC: x.com/moneycontrolcom
ಮುಂಬೈ: ಯುಪಿಐ ಮತ್ತು ಇತರ ಡಿಜಿಟಲ್ ವ್ಯವಸ್ಥೆಗಳು ದಿನದ 24 ಗಂಟೆ ಕೂಡಾ ಹಣದ ಹರಿವಿಗೆ ಅನುಕೂಲ ಕಲ್ಪಿಸಿದ್ದರೆ, ಭಾರತದ ಮಾರುಕಟ್ಟೆಗಳು ಕೂಡಾ ವಿದೇಶಿ ಮಾರುಕಟ್ಟೆಗಳ ಜತೆ ಬೆಸೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ಭಾರತದ ವಿತ್ತ ಮಾರುಕಟ್ಟೆ ತೆರೆದಿರುವ ಅವಧಿಯನ್ನು ಸಂಜೆ 5ರ ಬದಲಾಗಿ 7 ಗಂಟೆವರೆಗೆ ವಿಸ್ತರಿಸಲು ಭಾರತೀಯ ರಿಸರ್ವ್ ಬ್ಯಾಂಕಿನ ಉನ್ನತ ಮಟ್ಟದ ಸಮಿತಿ ಶಿಫಾರಸ್ಸು ಮಾಡಿದೆ.
ಈ ಬದಲಾವಣೆಯು ಬ್ಯಾಂಕ್ ಗಳಿಗೆ ಅಲ್ಪಾವಧಿ ದ್ರವ್ಯತೆಯನ್ನು ನಿರ್ವಹಿಸುವಲ್ಲಿ ಮತ್ತು ಅಂತರ ಬ್ಯಾಂಕ್ ಹಾಗೂ ಕೇಂದ್ರೀಯ ಬ್ಯಾಂಕ್ ಫಂಡ್ ಗಳನ್ನು ಅಳೆಯುವಲ್ಲಿ ಹೆಚ್ಚಿನ ಸ್ಥಿತಿಸ್ಥಾಪಕತ್ವವನ್ನು ನೀಡಲಿದೆ.
ಆರ್‌ಬಿಐ ನಿಯಂತ್ರಿತ ಮಾರುಕಟ್ಟೆಗಳಾದ್ಯಂತ ವಹಿವಾಟು ಮತ್ತು ವಿಲೇವಾರಿ ಅವಧಿಯ ಪರಾಮರ್ಶೆಗೆ ನಿಯೋಜಿಸಿದ್ದ ಕಾರ್ಯಪಡೆ ಈ ಶಿಫಾರಸ್ಸುಗಳನ್ನು ಮಾಡಿದೆ. ವಹಿವಾಟು ಅವಧಿಯು ಮಾರುಕಟ್ಟೆ ಕಾರ್ಯಾಚರಣೆಯನ್ನು ಹೇಗೆ ದಕ್ಷವಾಗಿ ರೂಪಿಸಬಲ್ಲದು, ದ್ರವ್ಯತೆಯ ಮೇಲೆ, ಚಂಚಲತೆ ಮೇಲೆ ಹಾಗೂ ಬೆಲೆ ಶೋಧನೆ ಮೇಲೆ ಹೇಗೆ ಪರಿಣಾಮ ಬೀರಬಲ್ಲದು ಎಂಬ ಬಗ್ಗೆ ವಿಶ್ಲೇಷಿಸಿ ಈ ನಿರ್ಧಾರಕ್ಕೆ ಬಂದಿದೆ.
ಈ ಹಿಂದೆ 2019ರಲ್ಲಿ ಇಂಥ ಪರಾಮರ್ಶೆ ನಡೆದ ಬಳಿಕ ಹೆಚ್ಚಿನ ಮಂದಿಯ ಪಾಲ್ಗೊಳ್ಳುವಿಕೆ, ವಿಸ್ತೃತ ಉತ್ಪನ್ನ ಶ್ರೇಣಿ, ವಿಶೇಷವಾಗಿ ಸರ್ಕಾರಿ ಭದ್ರತಾ ಪತ್ರಗಳಲ್ಲಿ ಅನಿವಾಸಿ ಚಟುವಟಿಕೆಗಳು ಹೆಚ್ಚಿರುವುದು ಮತ್ತಿತರ ಕಾರಣಗಳಿಂದ ಹಣಕಾಸು ಮಾರುಕಟ್ಟೆಯ ಗಾತ್ರ ಹಾಗೂ ಸಂಕೀರ್ಣತೆ ವಿಸ್ತರಣೆಯಾಗಿದೆ. ಆನ್ಶೋರ್ ಮತ್ತು ಆಫ್ಶೋರ್ ಮಾರುಕಟ್ಟೆ ನಡುವಿನ ಸಂಬಂಧ ಗಟ್ಟಿಯಾಗಿರುವುದು, ವ್ಯವಹಾರ ಮೂಲಸೌಕರ್ಯ ಸುಧಾರಣೆ, ದಿನವಿಡೀ ಸೇವೆ ಒದಗಿಸುವ ಪಾವತಿ ವ್ಯವಸ್ಥೆಗಳು ದ್ರವ್ಯತೆಯನ್ನು ಪರಿವರ್ತಿಸಿದ್ದು, ಮಾರುಕಟ್ಟೆ ಸಮಯವನ್ನು ಮರುಹೊಂದಾಣಿಕೆ ಮಾಡುವ ಅಗತ್ಯವಿದೆ ಎಂದು ನಿಯೋಗ ಅಭಿಪ್ರಾಯಪಟ್ಟಿದೆ.
ವಿತ್ತ ಮಾರುಕಟ್ಟೆಯಲ್ಲಿ ಕಾಲ್ ಮನಿ ವಹಿವಾಟನ್ನು 7 ಗಂಟೆಯವರೆಗೆ ವಿಸ್ತರಿಸಲು ಶಿಫಾರಸ್ಸು ಮಾಡಲಾಗಿದ್ದು, ಈ ವಹಿವಾಟಿನ ವರದಿ ಗವಾಕ್ಷಿಯ ಸಮಯ 7.30ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಮಾರುಕಟ್ಟೆ ರೆಪೊ ಮತ್ತು ತ್ರಿಪಕ್ಷೀಯ ರೆಪೊ ವಹಿವಾಟು ಹಾಲಿ ಇರುವ ಅವಧಿಗಿಂತ ಒಂದು ಗಂಟೆ ವಿಸ್ತರಣೆಯಾಗಿ ನಾಲ್ಕು ಗಂಟೆವರೆಗೆ ನಡೆಯುವಂತೆಯೂ ಸಮಿತಿ ಶಿಫಾರಸ್ಸು ಮಾಡಿದೆ.