×
Ad

ಧರ್ಮದ ನಯನ ಕುರುಡಾದಾಗ!

Update: 2025-07-31 07:26 IST

ಸ್ವತಃ ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಗಳು ಕೂಡ ಗುರುತಿಸಿಕೊಳ್ಳಲು ಹೇಸಿಗೆ ಪಡುವ, ಕ್ರಿಮಿನಲ್ ಚಟುವಟಿಕೆಗಳ ಹಿನ್ನೆಲೆಯಿರುವ ಪ್ರಮೋದ್ ಮುತಾಲಿಕ್ ಎಂಬ ಮೂರನೇ ದರ್ಜೆಯ ನಾಯಕನ ಜೊತೆಗೆ ವೇದಿಕೆ ಹಂಚಿಕೊಂಡು ಅದನ್ನು ತನ್ನ ಸಾಧನೆಯಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ. ಹಿರಿಯ ಕಾಂಗ್ರೆಸ್ ನಾಯಕಿ, ವಿಧಾನಪರಿಷತ್ತಿನ ವಿರೋಧ ಪಕ್ಷದ ಮೊತ್ತ ಮೊದಲ ನಾಯಕಿಯೆಂದು ಗುರುತಿಸಲ್ಪಟ್ಟ ಮೋಟಮ್ಮ ಅವರ ಐಡೆಂಟಿಟಿಯ ಮೂಲಕವೇ ಈಗಲೂ ಸಾರ್ವಜನಿಕವಾಗಿ ಗುರುತಿಸಲ್ಪಡುವ ನಯನಾ ಮೋಟಮ್ಮ ಎನ್ನುವ ಕಾಂಗ್ರೆಸ್‌ನ ಶಾಸಕಿ, ಇದೀಗ ತಾಯಿ ಮೋಟಮ್ಮ ಅವರ ಹೋರಾಟದ ವರ್ಚಸ್ಸಿನ ಆಲದ ಮರದ ನೆರಳಿನಿಂದ ಹೊರಬಂದು, ಪ್ರಮೋದ್ ಮುತಾಲಿಕ್ ಎನ್ನುವ ಜಾಲಿಯ ಮರದ ನೆರಳನ್ನು ಆಶ್ರಯಿಸಿ ಆ ಮೂಲಕ ತನ್ನ ರಾಜಕೀಯ ಭವಿಷ್ಯವನ್ನು ಹುಡುಕ ಹೊರಟಿದ್ದಾರೆ. ಹಾಲುಂಡು ಬೆಳೆದ ಮಕ್ಕಳೇ ಉಳಿಯುವುದಿಲ್ಲ, ಹೀಗಿರುವಾಗ ಪ್ರಮೋದ್ ಮುತಾಲಿಕ್ ಎನ್ನುವಾತ ಕಕ್ಕಿದ ದ್ವೇಷದ ವಿಷವನ್ನು ಉಂಡು ಉಳಿಯಲುಂಟೆ ಎಂದು ಮೂಡಿಗೆರೆಯ ಹಿರಿಯರು ಈ ಯುವ ನಾಯಕಿಯ ಅಚಾತುರ್ಯಕ್ಕೆ ಹಣೆಚಚ್ಚಿಕೊಳ್ಳುತ್ತಿದ್ದಾರೆ. ರಾಜಕೀಯವಾಗಿ ತಾನೂ ಪತನದ ಅಂಚಿಗೆ ಸಾಗುತ್ತಿರುವುದಲ್ಲದೆ, ಇಡೀ ಮೂಡಿಗೆರೆಯನ್ನು ಈ ವಿಷದ ಹಾವುಗಳಿಗೆ ನಯನಾ ಆಹಾರವಾಗಿ ಕೊಡಲು ಹೊರಟಿದ್ದಾರಲ್ಲ ಎಂದು ಮತದಾರರು ಖೇದ ಪಡುತ್ತಿದ್ದಾರೆ. ತನ್ನ ಈ ನಡೆಗೆ ಆಕೆ ನೀಡುತ್ತಿರುವ ಸಮರ್ಥನೆಗಳನ್ನು ಕೇಳಿ ಅವರು ದಂಗಾಗಿದ್ದಾರೆ. ಕಲಿತ ವಿದ್ಯೆ, ಓದಿದ ಸಂವಿಧಾನ ತಲೆ ಹತ್ತಲಿಲ್ಲ ಎಂದು ಭಾವಿಸೋಣ, ಆದರೆ ಕನಿಷ್ಠ ತನ್ನ ತಾಯಿಯ ಸಂಸರ್ಗವೂ ಅವರಲ್ಲಿ ಯಾಕೆ ವಿವೇಕವನ್ನು ಬಿತ್ತುವಲ್ಲಿ ವಿಫಲವಾಯಿತು ಎಂಬ ಪ್ರಶ್ನೆ ಮೂಡಿಗೆರೆಯ ಮತದಾರರನ್ನು ಮಾತ್ರವಲ್ಲ, ರಾಜ್ಯದ ಎಲ್ಲ ಪ್ರಜ್ಞಾವಂತರನ್ನೂ ಕಾಡುತ್ತಿದೆ.

ಮೂಡಿಗೆರೆಯಲ್ಲಿ ಸಂಘಪರಿವಾರ ಹಮ್ಮಿಕೊಂಡಿರುವ 'ಹಿಂದೂ ಸಂಗಮ ಮಹಾ ರ್ಯಾಲಿ'ಯ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್‌ನೊಂದಿಗೆ ಕೇಸರಿ ಶಾಲು ಧರಿಸಿ ವೇದಿಕೆ ಹಂಚಿಕೊಂಡ ನಯನಾ ಮೋಟಮ್ಮ, "ಕೇಸರಿ ಶಾಲು ಹಾಕಿಕೊಂಡಿರುವುದು ಗಣಪತಿಗಾಗಿ, ನನ್ನ ಧರ್ಮಕ್ಕಾಗಿ. ನನ್ನ ಜೊತೆಗೆ ನನ್ನ ಪಕ್ಷದ ಕಾರ್ಯಕರ್ತರೂ ಬಂದಿದ್ದಾರೆ. ಹಿಂದೂವಾಗಿ, ದಲಿತೆಯಾಗಿ, ಮಹಿಳೆಯಾಗಿ ನನ್ನನ್ನು ದೇವರು ಇಲ್ಲಿ ಹುಟ್ಟಿಸಿದ್ದಾನೆ. ಅದಕ್ಕಾಗಿ ಹಿಂದೂಧರ್ಮದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ" ಎಂದು ಹೇಳಿಕೊಂಡಿದ್ದಾರೆ. 'ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ತಪ್ಪೇನು?' ಎನ್ನುವ ಪ್ರಶ್ನೆಯನ್ನು ಅವರು ಜೊತೆಗಿಟ್ಟಿದ್ದಾರೆ. ನಯನಾ ಮೋಟಮ್ಮರಿಗೆ ಮಹಿಳೆಯಾಗಿ, ಹಿಂದೂವಾಗಿ ಬದುಕುವ ಎಲ್ಲ ಹಕ್ಕುಗಳಿವೆ. ಆದರೆ ಅವರನ್ನು ಈ ದೇಶದಲ್ಲಿ ದಲಿತರಾಗಿ, ಅಸ್ಪೃಶ್ಯರಾಗಿ ಮಾಡಿದ್ದು ದೇವರಲ್ಲ, ಈ ಸಮಾಜದ ಮೇಲ್ ವರ್ಣೀಯ ಜನರು ಎನ್ನುವ ವಾಸ್ತವವನ್ನು ಮರೆತಿದ್ದಾರೆ. ದಲಿತರನ್ನು ಹಿಂದೂಧರ್ಮದ ನಾಲ್ಕು ವರ್ಣಗಳಿಂದಲೂ ಹೊರಗಿಡಲಾಗಿದೆ ಎನ್ನುವ ಪ್ರಾಥಮಿಕ ತಿಳುವಳಿಕೆಯೂ ಅವರಿಗಿದ್ದಂತಿಲ್ಲ. ಪ್ರಮೋದ್ ಮುತಾಲಿಕ್ ಪ್ರತಿಪಾದಿಸುವ ಹಿಂದುತ್ತದ ಸಿದ್ದಾಂತ ಅವರನ್ನು ದಲಿತರೆಂದು ಮೂಲೆಗುಂಪು ಮಾಡಿದಾಗ, ಅವರನ್ನು ಮೇಲೆತ್ತಿ ಇಂದು ಶಾಸಕಿಯಂತಹ ಉನ್ನತ ಸ್ಥಾನಕ್ಕೇರಿಸಿದ್ದು ಅಂಬೇಡ್ಕರ್ ಅವರ ಹೋರಾಟ, ತ್ಯಾಗ, ಬಲಿದಾನಗಳು. ಈ ದೇಶದಲ್ಲಿ ಒಂದಿಷ್ಟು ದಲಿತರಾದರೂ ತಮ್ಮ ಹಕ್ಕುಗಳ ಜೊತೆಗೆ ಬದುಕುವ ಸ್ಥಿತಿ ನಿರ್ಮಾಣವಾಗಿರುವುದು ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ. ಅದಕ್ಕಾಗಿ ನಯನಾ ಮೋಟಮ್ಮ ಅವರು ಧರಿಸಬೇಕಾದುದು ನೀಲಿ ಶಾಲೇ ಹೊರತು, ಕೇಸರಿ ಶಾಲು ಅಲ್ಲ. ಜ್ಯೋತಿಬಾ ಪುಲೆ, ಸಾವಿತ್ರಿ ಫುಲೆಯಂತಹ ಮಹಾನ್ ಚೇತನಗಳು ನಯನಾ ಅವರಿಗೆ ಪ್ರಾತಃ ಸ್ಮರಣೀಯರಾಗಬೇಕು.

ತನ್ನನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದ ಅಂಬೇಡ್ಕರ್ ತತ್ವ ಸಿದ್ಧಾಂತಗಳ ಬಗ್ಗೆಯಂತೂ ಅರಿವಿಲ್ಲ. ಕನಿಷ್ಠ ಯಾವುದು ಹಿಂದೂ ಧರ್ಮ, ಯಾವುದು ಹಿಂದೂ ಧರ್ಮ ಅಲ್ಲ? ಯಾರು ಧಾರ್ಮಿಕ ನಾಯಕರು? ಯಾರು ಧಾರ್ಮಿಕ ನಾಯಕರು ಅಲ್ಲ ? ಎನ್ನುವುದರ ಪ್ರಜ್ಞೆಯಾದರೂ ಇದೆಯೋ ಎಂದರೆ ಅದೂ ಇಲ್ಲ. ಆ ಬಗ್ಗೆ ಸಣ್ಣ ತಿಳುವಳಿಕೆಯಾದರೂ ಅವರಿಗಿದ್ದಿದ್ದರೆ ಹಿಂದೂಧರ್ಮವನ್ನು ಪ್ರಮೋದ್ ಮುತಾಲಿಕ್ ಕಣ್ಣಲ್ಲಿ ನೋಡುತ್ತಿರಲಿಲ್ಲ. ಸ್ವಾಮಿ ವಿವೇಕಾನಂದ, ನಾರಾಯಣ ಗುರು, ಮಹಾತ್ಮಾಗಾಂಧೀಜಿಯಂತಹ ಚಿಂತಕರು ಹಿಂದೂಧರ್ಮ ಎಂದರೆ ಏನು ಎನ್ನುವುದನ್ನು ಈ ನೆಲದಲ್ಲಿ ಹರಡಿ ಹೋಗಿದ್ದಾರೆ. ಅವರನ್ನು ಪ್ರತಿನಿಧಿಸುವ ನೂರಾರು ಧಾರ್ಮಿಕ ನಾಯಕರು, ಚಿಂತಕರು ರಾಜ್ಯದಲ್ಲೂ, ದೇಶದಲ್ಲೂ ಇದ್ದಾರೆ. ಹಿಂದೂ ಧರ್ಮದ ತತ್ವಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿರುವ ಹಲವು ಸನ್ಯಾಸಿಗಳು, ಧಾರ್ಮಿಕ ಚಿಂತಕರು ನಮ್ಮ ನಡುವೆ ಇದ್ದಾರೆ. ಹಲವು ಪುಣ್ಯ ಕ್ಷೇತ್ರಗಳೂ ಇವೆ. ಗಣೇಶೋತ್ಸವ, ದಸರಾ, ಆಯುಧಪೂಜೆ, ದೀಪಾವಳಿ ಇತ್ಯಾದಿಗಳನ್ನು ಆಚರಿಸುವುದು ತಪ್ಪಂತೂ ಖಂಡಿತಾ ಅಲ್ಲ. ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದನ್ನೂ ಯಾರೂ ಪ್ರಶ್ನಿಸುವುದಿಲ್ಲ. ಈ ರಾಜ್ಯದ ಗೃಹ ಸಚಿವರು ಇತ್ತೀಚೆಗಷ್ಟೇ ಉಡುಪಿಯಲ್ಲಿ ಹೋಮಹವನ ನಡೆಸಿರುವುದು ಕೂಡ ಸುದ್ದಿಯಾಗಿತ್ತು. ಯಾರೂ ಅದನ್ನು ಟೀಕೆ ಮಾಡಿರಲಿಲ್ಲ. ಅದಕ್ಕೆ ರಾಜಕೀಯ ಬಣ್ಣವನ್ನೂ ಬಳಿದಿರಲಿಲ್ಲ. ಆದರೆ, ನಕಲಿ ಹಿಂದುತ್ವವಾದಿ ಪ್ರಮೋದ್ ಮೂಲಕ ಹಿಂದೂ ಧರ್ಮವನ್ನು ಅನುಸರಿಸುವ ದಯನೀಯ ಸ್ಥಿತಿ ಈ ಯುವ ನಾಯಕಿಗೆ ಒದಗಿ ಬಂದಿರುವ ಬಗ್ಗೆ ಹಿಂದೂ ಧಾರ್ಮಿಕ ನಾಯಕರೇ ಮರುಕ ಪಡುತ್ತಿದ್ದಾರೆ. ರಾಮಸೇನೆಯ ಮುಖಂಡನಾಗಿರುವ ಪ್ರಮೋದ್ ಮುತಾಲಿಕ್‌ಮೇಲೆ ಹಲವು ಕ್ರಿಮಿನಲ್ ಪ್ರಕರಣಗಳಿವೆ. ಸಿಂಧಗಿಯಲ್ಲಿ ಈತನ ಹಿಂಬಾಲಕರೇ ಪಾಕಿಸ್ತಾನ ಧ್ವಜವನ್ನು ಹಾರಿಸಿದ್ದರು. ಹುಬ್ಬಳ್ಳಿಯ ನ್ಯಾಯಾಲಯದ ಆವರಣದಲ್ಲಿ ಸ್ಪೋಟ ನಡೆಸಿದ ಆರೋಪಗಳಿವೆ. ಬಿಜೆಪಿ ಸರಕಾರವಿರುವ ಗೋವಾದಲ್ಲಿ ಈತನಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಉಗ್ರ ತರಬೇತಿ ನೀಡುತ್ತಿರುವ ಆರೋಪಗಳು ಈತನ ಮೇಲಿವೆ. ಈತನ ನೇತೃತ್ವದಲ್ಲಿ ನಡೆಯುವ ಹಿಂದೂ ಸಂಗಮವು ರಾಜಕೀಯ ಉದ್ದೇಶವನ್ನು ಹೊಂದಿದೆ. ಹಿಂದೂ ಧರ್ಮದ ಹೆಸರನ್ನು ದುರುಪಯೋಗ ಪಡಿಸಿಕೊಂಡು ನಾಡಿನ ಶಾಂತಿ ಕೆಡಿಸಿ ಅದರಿಂದ ರಾಜಕೀಯ ಲಾಭಗಳನ್ನು ಮಾಡಿಕೊಳ್ಳುವುದಕ್ಕಾಗಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆಯೇ ಹೊರತು, ಯಾವುದೇ ಧಾರ್ಮಿಕ ಸದುದ್ದೇಶದಿಂದ ಅಲ್ಲ ಮತ್ತು ಈ ಸಮಾವೇಶದಲ್ಲಿ ಗುರುತಿಸಿಕೊಂಡ ಕಾರಣಕ್ಕೆ ನಯನಾ ಮೋಟಮ್ಮರಿಗೆ ಸಜ್ಜನ ಹಿಂದೂ ಧರ್ಮೀಯರ ಮತಗಳು ಬೀಳುವುದೂ ಇಲ್ಲ. ಬದಲಿಗೆ ಈಗ ಇರುವ ಧಾರ್ಮಿಕರ ಮತಗಳನ್ನೂ ಅವರು ಕಳೆದುಕೊಳ್ಳಲಿದ್ದಾರೆ. ತನ್ನ ರಾಜಕೀಯ ದುರುದ್ದೇಶಕ್ಕೆ ಎಂತಹ ಕೆಳಮಟ್ಟಕ್ಕೂ ಇಳಿಯಬಲ್ಲೆ ಎನ್ನುವುದನ್ನು ನಯನಾಮೋಟಮ್ಮ ಅವರು ತೋರಿಸಿಕೊಟ್ಟಿದ್ದಾರೆ ಮತ್ತು ಈ ಮೂಲಕ ಕಾಂಗ್ರೆಸನ್ನು ಬ್ಲ್ಯಾಕ್‌ ಮೇಲ್ ಮಾಡಲು ಹೊರಟಿದ್ದಾರೆ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬಂತೆ ಉಳಿದವರೂ ಅದನ್ನು ಮಾದರಿಯಾಗಿಸಿಕೊಳ್ಳುವ ಮುನ್ನ ಕಾಂಗ್ರೆಸ್ ತನ್ನ ಪಕ್ಷದ ಸಿದ್ಧಾಂತಕ್ಕೆ ಬದ್ದವಾಗಿ ನಯನಾ ಮೋಟಮ್ಮ ವಿರುದ್ದ ಕ್ರಮ ತೆಗೆದುಕೊಳ್ಳಬೇಕಾಗಿದೆ. ಯಾವ ದಾಕ್ಷಿಣ್ಯವೂ ಇಲ್ಲದೆ ಆಕೆಯನ್ನು ಪಕ್ಷದಿಂದ ಹೊರಹಾಕಬೇಕು. ಈ ಮೂಲಕ, ಕಾಂಗ್ರೆಸ್ ಪಕ್ಷವು ಮೂಡಿಗೆರೆಯನ್ನು ನಕಲಿ ಹಿಂದುತ್ವವಾದಿಗಳಿಂದ ರಕ್ಷಿಸಿ, ತನ್ನನ್ನೂ ರಕ್ಷಿಸಿಕೊಳ್ಳಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News