×
Ad

ಸಚಿವ ಸ್ಥಾನ ತೊರೆದ ಸೆಂಥಿಲ್ ಬಾಲಾಜಿ, ಪೊನ್ನುಮುಡಿ; ತಮಿಳುನಾಡು ಸಂಪುಟ ಪುನರ್‌ರಚನೆ

Update: 2025-04-28 07:28 IST

ಸೆಂಥಿಲ್ ಬಾಲಾಜಿ | ಪೊನ್ನುಮುಡಿ 
PC: x.com/thenewsminute

ಚೆನ್ನೈ: ತಮಿಳುನಾಡಿನ ವಿದ್ಯುತ್ ಖಾತೆ ಸಚಿವ ಸೆಂಥಿಲ್ ಬಾಲಾಜಿ ಮತ್ತು ಅರಣ್ಯ ಖಾತೆ ಸಚಿವ ಪೊನ್ನುಮುಡಿ ಅವರು ರಾಜ್ಯಪಾಲ ಆರ್.ಎನ್.ರವಿ ಅವರಿಗೆ ರವಿವಾರ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇದಾದ ಸ್ವಲ್ಪ ಸಮಯದಲ್ಲೇ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರಾಜ್ಯ ಸಚಿವ ಸಂಪುಟ ಪುನರ್‌ರಚಿಸಿದ್ದಾರೆ.

ಸಾರಿಗೆ ಸಚಿವ ಎಸ್.ಎಸ್.ಶಿವಶಂಕರ್ ಅವರಿಗೆ ಹೆಚ್ಚುವರಿಯಾಗಿ ವಿದ್ಯುತ್ ಖಾತೆಯ ಹೊಣೆಯನ್ನೂ ವಹಿಸಲಾಗಿದೆ. ಗೃಹನಿರ್ಮಾಣ ಖಾತೆ ಸಚಿವ ಎಸ್.ಮುತ್ತುಸ್ವಾಮಿ ಅವರಿಗೆ ಅಬ್ಕಾರಿ ಮತ್ತು ಪಾನ ನಿಷೇಧ ಹೊಣೆ ವಹಿಸಲಾಗಿದೆ. ಈ ಎರಡು ಖಾತೆಗಳನ್ನು ಕೂಡಾ ಬಾಲಾಜಿ ಹೊಂದಿದ್ದರು.

ಹಾಲು ಮತ್ತು ಹೈನುಗಾರಿಕೆ ಅಭಿವೃದ್ಧಿ ಖಾತೆಯನ್ನು ನಿಭಾಯಿಸುತ್ತಿರುವ ಆರ್.ಎಸ್.ರಾಜ ಕಣ್ಣಪ್ಪನ್ ಅವರು ಅರಣ್ಯ ಮತ್ತು ಖಾದಿ ಖಾತೆಯನ್ನು ಕೂಡಾ ನಿಭಾಯಿಸಲಿದ್ದಾರೆ. ಇದರ ಜತೆಗೆ ಪದ್ಮನಾಭಪುರಂ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಟಿ.ಮಾನೋ ತಂಗರಾಜ್ ಅವರನ್ನು ಹೊಸದಾಗಿ ಸಂಪುಟಕ್ಕೆ ಸೇರಿಸಿಕೊಳ್ಳಲು ಶಿಫಾರಸ್ಸು ಮಾಡಿದ್ದಾರೆ. ಇವರು ಈ ಮೊದಲು ಹಾಲು ಮತ್ತು ಹೈನುಗಾರಿಕೆ ಅಭಿವೃದ್ಧಿ ಖಾತೆಯನ್ನು ನಿಭಾಯಿಸಿದ್ದರು.

ಹಿಂದಿನ ಎಡಿಎಂಕೆ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಚಿವರಾಗಿದ್ದ ಸಂದರ್ಭ ಉದ್ಯೋಗಕ್ಕಾಗಿ ಹಣ ಪಡೆದ ಆರೋಪದಲ್ಲಿ ಸೆಂಥಿಲ್ ಬಾಲಾಜಿ ವಿರುದ್ಧ ಕಾನೂನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದರೂ, ಜೈಲಿನಿಂದ ಬಿಡುಗಡೆಯಾದ ಬಳಿಕ ಸಚಿವ ಹುದ್ದೆ ವಹಿಸಿಕೊಂಡ ಹಿನ್ನೆಲೆಯಲ್ಲಿ ಸಚಿವ ಸ್ಥಾನ ತೊರೆಯುವಂತೆ ಅಥವಾ ಮತ್ತೆ ಜೈಲುಪಾಲಾಗುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News