×
Ad

ಶಿವಮೊಗ್ಗ | ಡೆತ್‌ನೋಟ್ ಬರೆದಿಟ್ಟು ಗೃಹಿಣಿ ನಾಪತ್ತೆ; ಭದ್ರಾ ನಾಲೆಗೆ ಹಾರಿರುವ ಶಂಕೆ

Update: 2025-11-26 23:26 IST

ಸಾಂದರ್ಭಿಕ ಚಿತ್ರ

ಶಿವಮೊಗ್ಗ : ಏಳು ತಿಂಗಳ ಹಿಂದೆ ವಿವಾಹವಾಗಿದ್ದ ಮಹಿಳೆಯೋರ್ವರು ವಾಟ್ಸ್‌ಆ್ಯಪ್‌ನಲ್ಲಿ ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಹೊಳೆಹೊನ್ನೂರು ಸಮೀಪದ ಲತಾ ಪಿ. (25) ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದು, ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಬಳಿ ಭದ್ರಾ ನಾಲೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಲತಾ ಅವರು ಎ.14ರಂದು ಶಿಕಾರಿಪುರ ತಾಲೂಕಿನ ದಿಂಡದಹಳ್ಳಿ ಗ್ರಾಮದ ಕೆಪಿಸಿಎಲ್‌ನಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿರುವ ಗುರುರಾಜ್ ಎಚ್. ಎಂಬವರೊಂದಿಗೆ ವಿವಾಹವಾಗಿದ್ದರು. ಮದುವೆಯಾದ ಏಳು ತಿಂಗಳಿನಲ್ಲಿ ಗಂಡ ಗುರುರಾಜ್, ಅತ್ತೆ ಶಾರದಮ್ಮ, ನಾದಿನಿಯರಾದ ನಾಗರತ್ನಮ್ಮ, ರಾಜೇಶ್ವರಿ ಹಾಗೂ ನಾಗರತ್ನಮ್ಮನ ಗಂಡ ಕೃಷ್ಣಪ್ಪ ಸೇರಿ ಐವರು ಕಿರುಕುಳ ನೀಡುತ್ತಿದ್ದರು ಎಂದು ದೂರಲಾಗಿದೆ.

ವಾಟ್ಸ್‌ಆ್ಯಪ್‌ನಲ್ಲಿ ಲತಾ ಅವರು ಬರೆದಿದ್ದಾರೆನ್ನಲಾದ ಡೆತ್‌ನೋಟ್ ಪತ್ತೆಯಾಗಿದ್ದು, ಇದರಲ್ಲಿ ಪತಿ ಸೇರಿ ಐವರ ವಿರುದ್ಧ ಕಿರುಕುಳದ ಆರೋಪ ಮಾಡಲಾಗಿದೆ ಎಂದು ತಿಳಿದು ಬಂದಿದೆ. ನಾಪತ್ತೆಯಾಗಿರುವ ವಿಷಯ ತಿಳಿಯುತ್ತಲೇ ಆಕೆಯ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದು, ಪೊಲೀಸ್ ಸಿಬ್ಬಂದಿ ಜೊತೆಯಲ್ಲಿ ಲತಾಗಾಗಿ ಹುಡುಕಾಟ ನಡೆಸಿದ್ದಾರೆ. ಈ ಮಧ್ಯೆ ಹಂಚಿನ ಸಿದ್ದಾಪುರ ಬಳಿಯ ಭದ್ರಾ ನಾಲೆಯ ಬಳಿ ಲತಾಗೆ ಸೇರಿದ ಬಿಳಿ ಬಟ್ಟೆ, ಮೊಬೈಲ್ ಪತ್ತೆಯಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕಿಸಲಾಗಿದೆ. ಸದ್ಯ ಲತಾ ಭದ್ರಾ ನಾಲೆಗೆ ಹಾರಿರುವ ಶಂಕೆಯಿಂದ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿಯು ಸ್ಥಳೀಯರೊಂದಿಗೆ ಶೋಧ ಕಾರ್ಯ ನಡೆಸಿದ್ದಾರೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News