ಮುಂದಿನ ಶೈಕ್ಷಣಿಕ ಸಾಲಿನ ಆರಂಭದಲ್ಲೇ 18,000 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ಶಿವಮೊಗ್ಗ : ಮುಂದಿನ ಶೈಕ್ಷಣಿಕ ಸಾಲಿನ ಆರಂಭದಿಂದಲೇ ಅನುಕೂಲವಾಗುವಂತೆ 18,000 ಶಿಕ್ಷಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರೌಢಶಾಲಾ ಸಂಪನ್ಮೂಲ ಶಿಕ್ಷಕರಿಗಾಗಿ ಶನಿವಾರ ಏರ್ಪಡಿಸಲಾಗಿದ್ದ ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರಸಕ್ತ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ ದೊರಕಿಸಿಕೊಡುವ ನಿಟ್ಟಿನಲ್ಲಿ ಶಿಕ್ಷಕರು ಕಲಿಕೆಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತಾಗಬಾರದು ಎಂದು ನಿರ್ದೇಶಿಸಿದರು.
ದೇಶದ ಮುಂದಿನ ಭವಿಷ್ಯ ಇಂದಿನ ವಿದ್ಯಾರ್ಥಿಗಳು. ಇಂತಹ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಮಹತ್ವದ ಕಾರ್ಯ ಶಿಕ್ಷಕರಿಂದ ಮಾತ್ರ ಸಾಧ್ಯ. ಅದಕ್ಕಾಗಿ ಶಿಕ್ಷಕರಾಗಿ ಪವಿತ್ರ ಸೇವೆ ಸಲ್ಲಿಸುತ್ತಿರುವ ಶಿಕ್ಷಕರೆಲ್ಲರೂ ಅಭಿನಂದನಾರ್ಹರು. ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸಮಸ್ಯೆ-ಸವಾಲುಗಳು ಎದುರಾಗುತ್ತಿವೆ. ಕಾಲಕಾಲಕ್ಕೆ ಅವುಗಳನ್ನು ಎದುರಿಸಿ ಮುನ್ನುಗ್ಗಬೇಕಾದ ಅನಿವಾರ್ಯವೂ ಇದೆ. ಆಡಳಿತಾರೂಢ ಸರಕಾರದ ಅಲ್ಪಾವಧಿಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತರಲಾಗಿದೆ. ಶಿಕ್ಷಕರೆಲ್ಲರ ಅಮೂಲ್ಯ ಸಹಕಾರದಿಂದ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ರಚನಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಸಚಿವರು ನುಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ವಿ.ರಶ್ಮೀ ಮಹೇಶ್ ಮಾತನಾಡಿ, ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ಸಲುವಾಗಿ ನೆರೆಯ ರಾಜ್ಯಗಳಲ್ಲಿ ಅನುಸರಿಸುತ್ತಿರುವ ಪರೀಕ್ಷಾ ಸುಧಾರಣಾ ಕ್ರಮಗಳನ್ನು ಕಳೆದ ಮೂರು ವರ್ಷಗಳಿಂದ ಅನುಸರಿಸಲಾಗುತ್ತಿದೆ ಎಂದು ತಿಳಿಸಿದರು.
ಈಗಾಗಲೇ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ವಿಶೇಷ ತರಗತಿಗಳನ್ನು ನಡೆಸುವುದು ಸೇರಿದಂತೆ 29 ಅಂಶಗಳನ್ನು ಅಳವಡಿಕೆ ಮಾಡಿಕೊಳ್ಳಲಾಗಿದೆ. ಪರೀಕ್ಷಾ ತಯಾರಿ, ವೇಳಾಪಟ್ಟಿಯನ್ನು ಈಗಾಗಲೇ ನಿಗದಿಪಡಿಸಲಾಗಿದೆ. ಪಠ್ಯ ಮತ್ತು ವಿಷಯವಾರು 4 ರೀತಿಯ ಮಾದರಿ ಪ್ರಶ್ನೆ ಪತ್ರಿಕೆಗಳು, ಮೂರು ಪರೀಕ್ಷಾ ಪೂರ್ವ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಲಾಗಿದೆ. ಅದರಲ್ಲಿ ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ಸರಳವಾಗಿ ಉತ್ತರಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಶಿಕ್ಷಕರು ಈ ಮಾದರಿಯನ್ನೇ ಅನುಸರಿಸಿ, ಕಲಿಕೆಗೆ ಮುಂದಾಗುವಂತೆ ರಶ್ಮೀ ಸಲಹೆ ನೀಡಿದರು.
ಜಿಪಂ ಸಿಇಒ ಎನ್.ಹೇಮಂತ್ ಮಾತನಾಡಿದರು. ಕಾರ್ಯಾಗಾರದಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು, ಡಿ.ಎಸ್.ಇ.ಆರ್.ಟಿ. ನಿರ್ದೇಶಕ ಗೋಪಾಲಕೃಷ್ಣ ಎಚ್.ಎನ್., ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ಹಾಗೂ ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಉಪನಿರ್ದೇಶಕ ಮಂಜುನಾಥ ಎಸ್. ಆರ್. ಸ್ವಾಗತಿಸಿದರೆ, ಕೃಷ್ಣಮೂರ್ತಿ ಎಚ್.ಆರ್.ವಂದಿಸಿದರು.