×
Ad

Shivamogga | ಭದ್ರಾವತಿ ಉಕ್ಕು ಕಾರ್ಖಾನೆಗೆ ಭೇಟಿ ನೀಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

"ಕಾರ್ಖಾನೆ ಪುನಶ್ಚೇತನ ಕುರಿತು ಚರ್ಚಿಸಿ, ವಿವಿಧ ಘಟಕಗಳ ಪರಿಶೀಲನೆ"

Update: 2025-11-30 01:18 IST

ಶಿವಮೊಗ್ಗ / ಭದ್ರಾವತಿ : ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಎರಡನೇ ಬಾರಿಗೆ ಭದ್ರಾವತಿಯ ಸರ್ ಎಂ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಭೇಟಿ ನೀಡಿದರು.

ಈ ಹಿಂದೆ ಉಕ್ಕು ಸಚಿವರಾದ ಕೂಡಲೇ 2024 ಜೂನ್ 30ರಂದು ಭೇಟಿ ನೀಡಿದ್ದರು. ಅದಾದ ಮೇಲೆ ಕಾರ್ಖಾನೆಯ ಪುನಶ್ಚೇತನದ ಬಗ್ಗೆ ಹಲವಾರು ಸಭೆಗಳನ್ನು ನಡೆಸಿದ್ದ ಸಚಿವರು ಮತ್ತೊಮೆ ಭದ್ರಾವತಿ ಕಾರ್ಖಾನೆಗೆ ಉಕ್ಕು ಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾರ್ಖಾನೆಗೆ ಆಗಮಿಸಿದ ಕೂಡಲೇ ಆಡಳಿತ ಮಂಡಳಿ ಜತೆ ಸಭೆ ನಡೆಸಿದ ಸಚಿವರು; ವಿವಿಧ ಯೋಜನೆಗಳು ಹಾಗೂ ಕಾರ್ಖಾನೆಯ ಸದ್ಯದ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿದರು. ಅಲ್ಲದೆ, ಉತ್ಪಾದನೆ ಹಾಗೂ ವೆಚ್ಚದ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಕಾರ್ಖಾನೆಯ ವಿವಿಧ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾರ್ಮಿಕರ ಧರಣಾ ಸ್ಥಳಕ್ಕೆ ಭೇಟಿ:

ಉಕ್ಕು ಕಾರ್ಖಾನೆಯ ಪುನಶ್ಚೇತನಕ್ಕೆ ಒತ್ತಾಯ ಮಾಡಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಕಾರ್ಮಿಕರಿಗೆ ಧೈರ್ಯ ತುಂಬಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಾಗೂ ಸರ್ ಎಂ ವಿಶ್ವೇಶ್ವರಯ್ಯ ಅವರು ಸ್ವಾತಂತ್ಯ್ರ ಪೂರ್ವದಲ್ಲಿಯೇ ಕಟ್ಟಿದ್ದ ಈ ಕಾರ್ಖಾನೆ ರಾಷ್ಟ್ರದ ಉಕ್ಕು ಕ್ಷೇತ್ರಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದೆ. ಹೀಗಾಗಿ ಹೇಗಾದರೂ ಮಾಡಿ ಕಾರ್ಖಾನೆಯನ್ನು ಉಳಿಸುವ ಬಗ್ಗೆ ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ಚಿಂತನೆ ನಡೆಸುತ್ತಿದೆ. ನಾನು ಉಕ್ಕು ಸಚಿವನಾದ ಮೇಲೆ ಈ ಕಾರ್ಖಾನೆಗೆ ಎರಡನೇ ಸಲ ಭೇಟಿ ನೀಡಿದ್ದೇನೆ. ಕೇಂದ್ರ ಸರಕಾರ ಎಷ್ಟು ಗಂಭೀರವಾಗಿ ಕಾರ್ಖಾನೆಯನ್ನು ಪರಿಗಣಿಸಿದೆ ಎಂಬುದಕ್ಕೆ ನನ್ನ ಭೇಟಿಯೇ ಸಾಕ್ಷಿ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಉಕ್ಕು ಕ್ಷೇತ್ರದ ಬಲವರ್ಧನೆಗೆ ಅತಿಹೆಚ್ಚು ಮಹತ್ವ ನೀಡುತ್ತಿದ್ದಾರೆ. ಉಕ್ಕು ಉತ್ಪಾದನೆಯಲ್ಲಿ ಸ್ವಾವಲಂಭನೆ ಸಾಧಿಸಬೇಕು ಎನ್ನುವ ಹೆಗ್ಗುರಿಯನ್ನು ಮೋದಿ ಅವರು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ಕಾರ್ಮಿಕರು ಆತಂಕಗೊಳ್ಳುವುದು ಬೇಡ ಎಂದು ಸಚಿವರು ಹೇಳಿದರು.

ಪರಿಶೀಲನಾ ಸಭೆಯಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಸದಸ್ಯ ಬಿ.ವೈ. ರಾಘವೇಂದ್ರ ಅವರು ಭಾಗಿಯಾಗಿ ಕೆಲ ಪ್ರಮುಖ ವಿಚಾರಗಳನ್ನು ಹಂಚಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News