×
Ad

ಶಿವಮೊಗ್ಗ: ಆನೆ ನಿಯಂತ್ರಣಕ್ಕೆ ತೆಗೆದಿದ್ದ ಗುಂಡಿಗೆ ಬಿದ್ದು ವ್ಯಕ್ತಿ ಮೃತ್ಯು

Update: 2025-08-31 11:05 IST

ಶಿವಮೊಗ್ಗ: ಆನೆ ನಿಯಂತ್ರಣಕ್ಕೆ ಅರಣ್ಯ ಇಲಾಖೆ ತೆಗೆದಿದ್ದ ಗುಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲೂಕು ತಮ್ಮಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡಿನಕೊಟ್ಟಿಗೆ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ನಾಗರಾಜ್ (32) ಎಂದು ಗುರುತಿಸಲಾಗಿದೆ. ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.

ಘಟನೆ ವಿವರ:

ಊರಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನೆ ಬಳಿಕ ಆಡಿಕೊಟ್ಟಿಗೆ ಗ್ರಾಮದ ದೇವಸ್ಥಾನದಲ್ಲಿ ಗ್ರಾಮಸ್ಥರು ಸಭೆ ನಡೆಸಿದ್ದರು. ಗಣೇಶೋತ್ಸವದ ಹಣಕಾಸು ವಿಚಾರವಾಗಿ ಚರ್ಚಿಸಿ ಮನೆಗೆ ತೆರಳಿದ್ದರು. ಆದರೆ ಶನಿವಾರ ಬೆಳಗ್ಗಿನವರೆಗೆ ನಾಗರಾಜ್ ಮನೆಗೆ ಹೋಗಿರಲಿಲ್ಲ. ಹಾಗಾಗಿ ಕುಟುಂಬದವರು, ಗ್ರಾಮಸ್ಥರು ಹುಡುಕಾಟ ನಡೆಸಿದಾಗ ಸಂಜೆ ಹೊತ್ತಿಗೆ ದೇವಸ್ಥಾನದ ಪಕ್ಕದಲ್ಲಿ ಆನೆ ನಿಯಂತ್ರಣಕ್ಕೆ ತೆಗೆಯಲಾಗಿದ್ದ ಗುಂಡಿಯಲ್ಲಿ ನಾಗರಾಜ್ ಮೃತದೇಹ ಪತ್ತೆಯಾಗಿದೆ.

ಆಡಿನಕೊಟ್ಟಿಗೆ ವ್ಯಾಪ್ತಿಯಲ್ಲಿ ಆನೆ ನಿಯಂತ್ರಣ ಟ್ರಂಚ್ (ಇಪಿಟಿ) ತೆಗೆಯುವಾಗ ಗ್ರಾಮಸ್ಥರು ವಿರೋಧಿಸಿದ್ದರು. ಮನೆಗಳ ಸಮೀಪ ಟ್ರಂಚ್ ತೆಗೆಯದಂತೆ ಆಗ್ರಹಿಸಿದ್ದರು. ಈಗ ಟ್ರಂಚ್‌ಗೆ ಬಿದ್ದು ನಾಗರಾಜ್ ಮೃತಪಟ್ಟಿದ್ದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News