ತೀವ್ರ ಜ್ವರದಿಂದ ಯುವಕನ ಬಹು ಅಂಗಾಂಗ ವೈಫಲ್ಯ: ಶಿವಮೊಗ್ಗದಿಂದ ಮಣಿಪಾಲಕ್ಕೆ ಝೀರೋ ಟ್ರಾಫಿಕ್‌ನಲ್ಲಿ ಸಾಗಿದ ಅಂಬ್ಯುಲೆನ್ಸ್
ಶಿವಮೊಗ್ಗ:ತೀವ್ರ ಜ್ವರದ ಕಾರಣ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಝೀರೋ ಟ್ರಾಫಿಕ್ ಮೂಲಕ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಿಂದ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಿರುವ ಘಟನೆ ಬುಧವಾರ ನಡೆಯಿತು.
ತೀರ್ಥಹಳ್ಳಿ ತಾಲೂಕಿನ ಹುಂಚ ಹೋಬಳಿಯ ಶಂಕರಹಳ್ಳಿ ಗ್ರಾಮದ ಶ್ರೇಯಾಂಕ(21) ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಯುವಕ.
ತೀವ್ರ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಂಗಳವಾರ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರಿಗೆ ಯುವಕನು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವುದು ಗೊತ್ತಾಗಿದೆ. ಯುವಕನ ಆರೋಗ್ಯ ಪರಿಸ್ಥಿತಿ ಗಂಭೀರವಾಗಿರುವ ಬಗ್ಗೆ ವೈದ್ಯರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ವೈದ್ಯರ ಸಲಹೆ ಮೇರೆಗೆ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದಿಂದ ಮಣಿಪಾಲ್ ಆಸ್ಪತ್ರೆಗೆ ಝೀರೋ ಟ್ರಾಫಿಕ್ ಮೂಲಕ ಶಿಫ್ಟ್ ಮಾಡಿದರು.
ಶಿವಮೊಗ್ಗ ಪಶ್ಚಿಮ ಸಂಚಾರಿ ಠಾಣೆ ಪಿಎಸ್‌ಐ ತಿರುಮಲೇಶ್ ನೇತೃತ್ವದಲ್ಲಿ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದರು.