ಭದ್ರಾವತಿ ಮಹಿಳಾ ಗಣಿ ಅಧಿಕಾರಿಗೆ ಅವಾಚ್ಯ ಶಬ್ದದಿಂದ ನಿಂದನೆ ಆರೋಪ : ದೂರು ದಾಖಲು
ಶಿವಮೊಗ್ಗ : ತಮ್ಮ ವಿರುದ್ದ ವ್ಯಕ್ತಿಯೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಆತನ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಭದ್ರಾವತಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಜ್ಯೋತಿ ಅವರು ದೂರು ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಹಿಳಾ ಅಧಿಕಾರಿ ಜ್ಯೋತಿ ಅನಾಮಧೇಯ ವ್ಯಕ್ತಿಗಳ ವಿರುದ್ಧ ಮೊದಲು ಎಸ್‌ಪಿ ಕಚೇರಿಗೆ ದೂರು ನೀಡಿದ್ದಾರೆ. ಬಳಿಕ ಭದ್ರಾವತಿಯ ಡಿವೈಎಸ್‌ಪಿ ಕಚೇರಿಗೂ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲು ಮಾಡಿದ್ದೇನೆ. ಅವತ್ತು ದಾಳಿ ಮಾಡಿದಾಗ ಏನು ಸಮಸ್ಯೆ ಆಯಿತು ಎಂಬ ಬಗ್ಗೆ ದೂರು ನೀಡಿದ್ದೇನೆ. ಮರಳು ಮಾಫಿಯಾ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ನಮ್ಮ ಮೇಲೆ ಗಾಡಿ ಹತ್ತಿಸಿ ಎಂದು ಹೇಳುತ್ತಿದ್ದರು. ಆಗ ಭಯ ಆಯಿತು. ಪೋನ್ ಕಾಲ್ ಕೂಡ ಬಂತು ಹಾಗಾಗಿ ವಾಪಾಸ್ ಬಂದೆ. ಅವತ್ತು ದಾಳಿ ವೇಳೆ ಬೆದರಿಕೆ ಸಹ ಇತ್ತು ಎಂದರು.
ಘಟನೆ ಬಗ್ಗೆ ಈಗಾಗಲೇ ಎಫ್‌ಐಆರ್ ದಾಖಲಿಸಿದ್ದೇನೆ. ನನ್ನ ಜೊತೆ ಯಾರು ಮಾತನಾಡಿದ್ದಾರೆ. ಯಾರು ನನಗೆ ಬೈದರು ಎನ್ನುವ ಸ್ಪಷ್ಟತೆ ಇಲ್ಲ, ತನಿಖೆ ನಂತರ ಸತ್ಯಾಸತ್ಯೆ ಹೊರಬರಲಿ ಎಂದು ತಿಳಿಸಿದರು.
ಮಗನದ್ದು ತಪ್ಪೇ ಇಲ್ಲ:
ಇನ್ನು ಈ ಪ್ರಕರಣ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್, ನನ್ನ ಮಗನದ್ದು ತಪ್ಪೇನಿಲ್ಲ. ರಾಜಕೀಯದಲ್ಲಿ ಈ ರೀತಿಯ ಆರೋಪಗಳು ಸಹಜ. ಇದು ಬಿಜೆಪಿ-ಜೆಡಿಎಸ್ ನವರ ಹುನ್ನಾರ. ಮಹಿಳಾ ಅಧಿಕಾರಿಗೆ ಮಧ್ಯರಾತ್ರಿ 12 ಗಂಟೆಗೆ ಅಲ್ಲಿಗೆ ಹೋಗುವ ಅವಶ್ಯಕತೆ ಏನಿತ್ತು. ಆ ಮಹಿಳೆ ದುಡ್ಡಿಗೆ ಬೇಡಿಕೆ ಇಟ್ಟಿದ್ದರು. ನಾವು ಮರಳು ಮಾರಾಟಕ್ಕೆ ಮಾಡುತ್ತಿಲ್ಲ. ದೇವಾಲಯಕ್ಕೆ, ಬಡವರು ಮನೆ ಕಟ್ಟಿಕೊಳ್ಳಲು ನೀಡುತ್ತೇವೆ. ವಿಡಿಯೋದಲ್ಲಿ ಕಾಣಿಸಿದಂತೆ ಮಾತನಾಡಿರುವುದು ನನ್ನ ಮಗನಲ್ಲ. ನಾನು ಫೋನ್ ಮಾಡಿ ವಿಚಾರಿಸಿದ್ದೇನೆ. ನನ್ನ ಮಗ ಆ ರೀತಿ ಮಾಡೇ ಇಲ್ಲ ಎಂದು ಹೇಳಿದ್ದಾರೆ.
ಏನಿದು ಘಟನೆ : ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ದಾಳಿ ನಡೆಸಿದ ಸಂದರ್ಭದಲ್ಲಿ ಜಿಲ್ಲೆಯ ಶಾಸಕರೊಬ್ಬರ ಪುತ್ರನೆಂದು ಹೇಳಿಕೊಂಡ ವ್ಯಕ್ತಿಯಿಂದ ಮೊಬೈಲ್ ಮೂಲಕ ಮಹಿಳಾ ಅಧಿಕಾರಿ ವಿರುದ್ಧ ಅಶ್ಲೀಲ ಪದ ಬಳಸಿ ಬೆದರಿಕೆ ಹಾಕಿದ ಘಟನೆ ನಡೆದಿತ್ತು. ಮಹಿಳಾ ಅಧಿಕಾರಿ ವಿರುದ್ಧ ಅಶ್ಲೀಲ ಪದ ಬಳಸಿ ಹರಿಹಾಯ್ದ 47 ಸೆಕೆಂಡ್ ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.