×
Ad

ಶಿವಮೊಗ್ಗ ಜಿಲ್ಲಾದ್ಯಂತ ಭಾರೀ ಮಳೆ ; ಜನಜೀವನ ಅಸ್ತವ್ಯಸ್ತ

Update: 2024-10-20 14:24 IST

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾದ್ಯಂತ ಶನಿವಾರ ತಡರಾತ್ರಿ ಬಾರಿ ಮಳೆಯಾಗಿದ್ದು, ಮನೆ, ರಸ್ತೆಗಳಿಗೆ ಮಳೆ ನೀರು ನುಗ್ಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್, ಟ್ಯಾಂಕ್ ಮೊಹಲ್ಲಾ, ಅಂಗಳಯ್ಯನಕೆರೆ ಬಡಾವಣೆ, ಅಣ್ಣಾನಗರ, ಅಶ್ವಥ ನಗರ, ಎಲ್‌ಬಿಎಸ್ ಬಡಾವಣೆ, ಸೋಮಿನಕೊಪ್ಪ ಸಮೀಪದ ಕನಕ ನಗರ ಬಡಾವಣೆ, ಆಲ್ಕೊಳ ಬಡಾವಣೆಗಳು ಮಳೆಗೆ ತತ್ತರಿಸಿವೆ. ಕೆಲವು ಬಡಾವಣೆಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಎಲ್ಲೆಡೆ ನೀರು ನಿಂತಿದ್ದು, ಮನೆಯಿಂದ ಹೊರ ಬರಲಾಗದೆ ಜನರು ಪರದಾಡುತ್ತಿದ್ದಾರೆ. 

ಕುಸಿದ ಮನೆಗಳು :

ಮಳೆಯ ಅಬ್ಬರಕ್ಕೆ ಶಿವಮೊಗ್ಗದ 18 ನೇ ವಾರ್ಡ್‌ ಏಳನೇ ಕ್ರಾಸ್‌ ಚಾನಲ್‌ ಏರಿಯಾದಲ್ಲಿ ಪರ್ವಿನ್‌ ತಾಜ್‌ ಎಂಬವರಿಗೆ ಸೇರಿದ ಮನೆ ಕುಸಿದಿದೆ. ರಾತ್ರಿಸುರಿದ ಮಳೆಯಿಂದಾಗಿ ಮನೆ ಗೋಡೆಗಳು ಕುಸಿದು ಬಿದ್ದಿದೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ದಿಲ್‌ಶದ್‌, ರೋಜಿ ಮೇರಿ ಹಾಗೂ ರಾಜು ಮತ್ತು ಫಿಲೋಮೀನಾ ಶಾಂತಮ್ಮ ಮೋಹನ್‌ ಎಂಬವರಿಗೆ ಸೇರಿದ ಮನೆಗಳು ಸಹ ಮಳೆಯಿಂದಾಗಿ ಕುಸಿದು ಬಿದ್ದಿದೆ. ಕೆಲವು ಮನೆಗಳ ಒಳ ಆವರಣ ಕುಸಿದು ಬಿದ್ದಿದೆ. ಇನ್ನೂ ಕೆಲ ಮನೆಗಳು ಪೂರ್ತಿಯಾಗಿ ಕುಸಿದಿದೆ.

ಕೋಳಿ ಫಾರಂಗೆ ನುಗ್ಗಿದ ನೀರು, ಕೋಳಿಗಳು ಸಾವು:

ತಡರಾತ್ರಿಯಿಂದ ಸುರಿದ ಧಾರಾಕಾರ ಮಳೆಯಿಂದ ಕೋಳಿ ಫಾರಂಗೆ ಕೆರೆ ನೀರು ನುಗ್ಗಿದ ಘಟನೆ ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈದೊಟ್ಲು ಗ್ರಾಮದಲ್ಲಿ ನಡೆದಿದೆ.

ಚಂದ್ರೇಗೌಡ ಎಂಬುವರಿಗೆ ಸೇರಿದ ಕೋಳಿ ಫಾರಂಗೆ ನೀರು ನುಗ್ಗಿದ್ದು, ಸಾವಿರಾರು ಕೋಳಿಗಳು ಸಾವನ್ನಪ್ಪಿದೆ. ಪರಿಹಾರಕ್ಕಾಗಿ ಕೋಳಿ ಫಾರಂ ಮಾಲೀಕರು ಆಗ್ರಹಿಸಿದ್ದಾರೆ.

ಶಿವಮೊಗ್ಗ ನಗರ ಪ್ರದೇಶ ಅಲ್ಲದೆ, ಶಿವಮೊಗ್ಗದ ಕಾಡಂಚಿನ ಪ್ರದೇಶಗಳಲ್ಲಿ ವಿಪರೀತ ಮಳೆಯಾಗಿದ್ದು, ರಾತ್ರಿಯಿಡೀ ಸುರಿದ ಮಳೆಯ ಆರ್ಭಟಕ್ಕೆ ಕಾಡು ಪ್ರದೇಶಗಳ ತಗ್ಗಿನ ಕಡೆ ಪ್ರವಾಹದ ರೀತಿಯಲ್ಲಿ ನೀರು ಹರಿದು ಬಂದಿದೆ.

ಸಕ್ರೆಬೈಲ್‌ ಆನೆ ಬಿಡಾರದ ಸಮೀಪ ಹೆದ್ದಾರಿ ಮೇಲೆಯೇ ಎರಡು ಅಡಿ ಎತ್ತರಕ್ಕೆ ನೀರು ಹರಿಯುತ್ತಿತ್ತು. ಸುಮಾರು ಐವತ್ತು ಅಡಿ ವ್ಯಾಪ್ತಿಯಲ್ಲಿ ನೀರು ಹರಿಯುತ್ತಿದ್ದರಿಂದ ತೀರ್ಥಹಳ್ಳಿಯಿಂದ ಶಿವಮೊಗ್ಗ, ಶಿವಮೊಗ್ಗ ಕಡೆಯಿಂದ ತೀರ್ಥಹಳ್ಳಿಗೆ ಕಡೆಗೆ ಹೋಗುವ ವಾಹನಗಳು ಪರದಾಡುವಂತಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News