ಜಿಎಸ್‌ಟಿ ಪಾಲು ಕೊಡಿಸುವಲ್ಲಿ ರಾಜ್ಯದ ಬಿಜೆಪಿ ಸಂಸದರು ವಿಫಲ : ಮಧುಬಂಗಾರಪ್ಪ
ಶಿವಮೊಗ್ಗ : ರಾಜ್ಯದ ಪಾಲಿನ ಜಿಎಸ್ ಟಿಯನ್ನು ಕೊಡಿಸುವಲ್ಲಿ ರಾಜ್ಯದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ. ಜಿಎಸ್‌ಟಿ ಕೊಡಿಸುವುದಿರಲಿ, ಕರ್ನಾಟಕಕ್ಕೆ ಕೊಡಬೇಡಿ ಎಂದು ಹೇಳಿದವರು ಇವರೇ ಎಂದು ರಾಜ್ಯ ಬಿಜೆಪಿ ಸಂಸದರ ವಿರುದ್ದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಿಡಿ ಕಾರಿದ್ದಾರೆ.
ಇಂದಿನಿಂದ ಜಿಎಸ್‌ಟಿ ಕಡಿಮೆಯಾಗಿದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೌದು ಕಡಿಮೆಯಾಗಿದೆ. ಆದರೆ, ಕೇಂದ್ರ ಸರಕಾರ ನಮ್ಮಿಂದ ಕೊಳ್ಳೆ ಹೊಡೆಯುವುದು ತಪ್ಪಿಲ್ಲವಲ್ಲ, ಸುಪ್ರೀಂಕೋರ್ಟ್ ಈ ಬಗ್ಗೆ ಛೀಮಾರಿ ಹಾಕಿದ್ದರೂ ನಮ್ಮ ಪಾಲಿನ ಜಿಎಸ್‌ಟಿ ಹಣ ಬರಲೇ ಇಲ್ಲ. ನಮ್ಮ ರಾಜ್ಯದ ಹಣವನ್ನು ಬೇರೆ ರಾಜ್ಯಗಳಿಗೆ ಕೊಟ್ಟರೆ ಆ ಅನ್ಯಾಯವನ್ನು ನಾವು ಹೇಗೆ ಸಹಿಸಿಕೊಳ್ಳಬೇಕು?. ರಾಜ್ಯದ ಬಿಜೆಪಿ ಸಂಸದರು ಇದಕ್ಕೆ ಉತ್ತರ ಕೊಡಬೇಕಲ್ಲ ಎಂದು ಪ್ರಶ್ನಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಅತಿವೃಷ್ಟಿಯಾಗಿದೆ. ಸುಮಾರು 80 ಸಾವಿರ ಎಕರೆ ಜಿಲ್ಲೆಯೊಂದರಲ್ಲಿಯೇ ನಾಶವಾಗಿದೆ. 100 ಕೋಟಿ ರೂ. ಜಿಲ್ಲೆಗೆ ಬೇಕಾಗಿದೆ. ಇದರಲ್ಲಿ ಕೇಂದ್ರ ಸರಕಾರದ ಪಾತ್ರವೂ ಇದೆಯಲ್ಲವೇ?. ಕೊಳೆರೋಗದಿಂದ ನಮ್ಮ ಜಿಲ್ಲೆಯ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಅವರಿಗೆಲ್ಲಾ ಕೇಂದ್ರ ಸರಕಾರ ಸ್ಪಂದಿಸಬೇಕು ತಾನೇ?. ನಮ್ಮ ಅಡಿಕೆ ಬೆಳೆಗಾರರ ಜಿಎಸ್‌ಟಿ ಹಣವನ್ನು ನಮಗೆ ಕೊಡಲು ಏಕೆ ಸಾಧ್ಯವಿಲ್ಲ ಎಂದು ಸಚಿವರು ಪ್ರಶ್ನಿಸಿದರು.
ಮೈಸೂರು ದಸರಾ ಉದ್ಘಾಟನೆ ಸಂಬಂಧಿಸಿದಂತೆ ಮಾಧ್ಯಮಗಾರರಿಗೆ ಉತ್ತರಿಸಿದ ಮಧು ಬಂಗಾರಪ್ಪ , ಸಂವಿಧಾನದ ಜಾತ್ಯತೀತ ಆಶಯದಂತೆ ಬಾನು ಮುಸ್ತಾಕ್ ಅವರು ದಸರಾ ಉದ್ಘಾಟಿಸುತ್ತಿರುವುದು ಅರ್ಥಪೂರ್ಣವಾಗಿದೆ. ಇದು ಸಂವಿಧಾನಕ್ಕೆ ಸಂದ ಗೌರವ. ಸುಪ್ರೀಂ ಕೋರ್ಟ್‌ನ ಇಂತಹ ನಿರ್ಧಾರದಿಂದ ನಮ್ಮ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗುತ್ತಿದೆ ಎಂದರು. ಶಿವಮೊಗ್ಗ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 83,000 ಎಕರೆ ಅಡಿಕೆ ಬೆಳೆ ನಾಶವಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ವರದಿ ಕೊಟ್ಟಿದ್ದಾರೆ. 80 ಕೋಟಿ ರೂ. ಶಿವಮೊಗ್ಗಕ್ಕೆ ಬರುವ ವ್ಯವಸ್ಥೆ ಮಾಡಲಾಗಿದೆ. ಕೇಂದ್ರಕ್ಕೂ ಈ ಬಗ್ಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.