MEIF ಶಿವಮೊಗ್ಗ ಘಟಕ ಉದ್ಘಾಟನೆ | ಶಿಕ್ಷಕರಿಗೆ ಜಿಲ್ಲಾ ಮಟ್ಟದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ
ಶಿವಮೊಗ್ಗ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕದ ಉದ್ಘಾಟನೆಯು ಇಖ್ಲಾಸ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಇಂದು ನಡೆಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಅವರು ಮಾತನಾಡಿ, MEIFಈಗಾಗಲೇ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು, ಕಾರ್ಯ ಚಟುವಟಿಕೆಗಳನ್ನು ಪ್ರಾರಂಭಿಸಿರುತ್ತೇವೆ. ಇಂದು ಶಿವಮೊಗ್ಗ ಜಿಲ್ಲೆ ಘಟಕ ಅಧಿಕೃತವಾಗಿ ಲೋಕಾರ್ಪಣೆಗೊಂಡು ಶಿವಮೊಗ್ಗ ಜಿಲ್ಲೆಗೂ ವಿಸ್ತರಿಸಿದ್ದು ಸಂತಸ ತಂದಿದೆ. ಇನ್ನು ಮುಂದೆ ಹಾಸನ ಜಿಲ್ಲೆಗೂ ವಿಸ್ತರಿಸಲಾಗುವುದು ಎಂದು ಹೇಳಿದರು.
MEIF ಶಿವಮೊಗ್ಗ ಘಟಕವನ್ನು ಉದ್ಘಾಟಿಸಿದ ಇಂಜಿನಿಯರ್ ಮುಹಮ್ಮದ್ ಇಬ್ರಾಹಿಂ (ಮುಖ್ಯ ಕಾರ್ಯನಿರ್ವಹಣೆ ಅಧಿಕಾರಿ MG ಗ್ರೂಪ್ ಶಿವಮೊಗ್ಗ) ಇವರು ಮಾತನಾಡಿ MEIF ಸಂಸ್ಥೆಯ ಶೈಕ್ಷಣಿಕ ಅಭಿವೃದ್ಧಿ ಚಟುವಟಿಕೆಗಳು ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದು ಹೇಳಿದರು.
MEIF ಉಪಾಧ್ಯಕ್ಷ ಕೆ.ಎಂ. ಮುಸ್ತಫ ಸುಳ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕಣ್ಣೂರು IAS, IPS ಸ್ಪರ್ಧಾತ್ಮಕ ಪರೀಕ್ಷೆ ಕುರಿತು ತಯಾರಿಸಲಾದ ಪಠ್ಯಕ್ರಮ ಗಳ ಮಾಹಿತಿ ನೀಡಿದರು.
MEIF ಶಿವಮೊಗ್ಗ ಘಟಕದ ಗೌರವಾಧ್ಯಕ್ಷ ಸೈಯದ್ ನೂರುಲ್ ಹಕ್ (ಇಖ್ಲಾಸ್ ಆಂಗ್ಲ ಮಾಧ್ಯಮ ಶಾಲೆ), ಅಧ್ಯಕ್ಷರಾದ ಫರ್ವೇಝ್ ಅಹ್ಮದ್ (ಕಾರ್ಯದರ್ಶಿ ಅಲ ಹಿಲಾಲ್ ಆಂಗ್ಲ ಮಾಧ್ಯಮ ಶಾಲೆ) ಮುದಸ್ಸರ್ ಅಹ್ಮದ್ (ಆಜ್ಕ ಇಂಕಿಲಾಬ್ ಪತ್ರಿಕೆಯ ಸಂಪಾದಕರು), MEIF ಕೇಂದ್ರ ಸಮಿತಿ ಕಾರ್ಯದರ್ಶಿ ಮೊಹಮ್ಮದ್ ಶಾರಿಕ್, ಶಿವಮೊಗ್ಗ ಘಟಕ ಪ್ರಧಾನ ಕಾರ್ಯದರ್ಶಿ ಸೈಯದ್ ನೂರುಲ್ಲಾಹ್, ಪದಾಧಿಕಾರಿ ಇಲ್ಯಾಸ್ ಅಹ್ಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯ ಮಟ್ಟದ ತರಬೇತುದಾರರಾದ ಪ್ರೊ. ರಾಜೇಂದ್ರ ಭಟ್ ಕೌಶಲ್ಯಾಭಿವೃದ್ಧಿ ಕಾರ್ಯಾಗಾರವನ್ನು ನಿರ್ವಹಿಸಿದರು.
ಪ್ರಾರಂಭದಲ್ಲಿ ಹಾಫಿಝ್ ಇದ್ರೀಸ್ ಅಹ್ಮದ್ ಕಿರಾಅತ್ ನೆರವೇರಿಸಿದರು. ಶಿವಮೊಗ್ಗ ಜಿಲ್ಲೆಯ ಸುಮಾರು 30 ವಿದ್ಯಾ ಸಂಸ್ಥೆಗಳ 350ಕ್ಕೂ ಅಧಿಕ ಶಿಕ್ಷಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.