ಶಿವಮೊಗ್ಗ | ʼರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸಬೇಡಿʼ : ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಚಿವ ಮಧುಬಂಗಾರಪ್ಪ ಸೂಚನೆ
ಶಿವಮೊಗ್ಗ : ನ್ಯಾಯಾಲಯದ ಆದೇಶವಿದೆ ಎಂದು ಟಾರ್ಗೆಟ್ ಮಾಡಿಕೊಂಡು ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಲಾ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಕೆಆರ್‌ಐಡಿಎಲ್, ನೀರಾವರಿ ಇಲಾಖೆಗಳ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನಾದಿ ಕಾಲದಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ನೋಟಿಸ್ ನೀಡುವುದು, ತೊಂದರೆ ಕೊಟ್ಟು ಒಕ್ಕಲೆಬ್ಬಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬಾರದು. ಹಾಗೂ ರೈತರ ಪರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ವಯ ನಡೆದುಕೊಳ್ಳಬೇಕೆಂದು ಸಂಬಂಧಿಸಿದ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಮಲೆನಾಡಿನಲ್ಲಿ ಅರಣ್ಯ ಭೂಮಿ ಸಮಸ್ಯೆ ಬಹಳ ಹಿಂದಿನಿಂದಲೂ ಇದೆ. ನ್ಯಾಯಾಲಯದ ಆದೇಶವಿದೆ ಎಂಬ ಮಾತ್ರಕ್ಕೆ ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸಬಾರದು. ಅರಣ್ಯ ಒತ್ತುವರಿ ತೆರವಿನ ವೇಳೆ ರೈತರ ಮೇಲೆ ಹಲ್ಲೆ ನಡೆಸುವುದು ಕಂಡು ಬಂದಲ್ಲಿ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ಸರಕಾರ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಸಿದರು.
ಹೊಸದಾಗಿ ಒತ್ತುವರಿಗೆ ಅವಕಾಶ ನೀಡಬಾರದು. ಹಾಗೂ 27-04-1978 ರ ಪೂರ್ವದ ಅರಣ್ಯ ಒತ್ತುವರಿವನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ ಅವರು, ಸರಕಾರದ ವಿವಿಧ ಭೂ ಮಂಜೂರಾತಿ ಕಾಯ್ದೆ ಹಾಗೂ ನಿಯಮಗಳ ಅಡಿಯಲ್ಲಿ ಮಂಜೂರು ಮಾಡಲಾದ ರೈತರ ಸಾಗುವಳಿ/ವಸತಿ ಭೂಮಿಗಳನ್ನು ಅರಣ್ಯ ಭೂಮಿ ಇಂಡೀಕರಣ ಪ್ರಸ್ತಾವನೆಯಿಂದ ಕೈಬಿಡುವ ಸಂಬಂಧ ಕೈಗೊಂಡ ಕ್ರಮದ ಕುರಿತು ವರದಿಯನ್ನು ನೀಡಬೇಕೆಂದು ತಿಳಿಸಿದರು.
ಶಾಸಕರಾದ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಮಲೆನಾಡಿನ ಭಾಗದಲ್ಲಿ ರೈತನ್ನು ಒಕ್ಕಲೆಬ್ಬಿಸುವ ಸಂಬಂಧ ನೋಟಿಸ್ ನೀಡಲಾಗುತ್ತಿದೆ. ಕೆಲವೆಡೆ ತೊಂದರೆ ನೀಡಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದರು.
ಸಿಸಿಎಫ್ ಹನುಮಂತಪ್ಪ ಮಾತನಾಡಿ, ಪಿಎಫ್ ಮತ್ತು ಎಂಎಫ್ ಪ್ರಕರಣಗಳು ಕಿರು ಅರಣ್ಯ ವ್ಯಾಪ್ತಿಗೆ ಬರುತ್ತವೆ. ಇವುಗಳನ್ನು ಸೆಟ್ಲ್ ಮಾಡಬಹುದು, ಈ ಸಂಬಂಧ 375 ಅಧಿಸೂಚನೆಗಳಿವೆ ಎಂದು ತಿಳಿಸಿದರು.
ನೀರಾವರಿ ಇಲಾಖೆ : ಸೊರಬ ತಾಲ್ಲೂಕಿನ ಗುಡುವಿ, ಯಡಗೊಪ್ಪ, ದಂಡಾವತಿ ಮತ್ತು ವರದಾ ನದಿಗಳಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸುವ ರೂ.160 ಕೋಟಿ ಮೊತ್ತದ ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸಬೇಕು. ಹಾಗೂ ಕಾಲು ಸಂಕಗಳ ಕಾಮಗಾರಿಯನ್ನು ಸಹ ಕೈಗೆತ್ತಿಕೊಳ್ಳಬೇಕು. ಅಧಿಕಾರಿಗಳ ನಡುವೆ ಸಮನ್ವಯತೆ ಇದ್ದಲ್ಲಿ ಕಾಮಗಾರಿ ಕ್ಷಿಪ್ರಗತಿಯಲ್ಲಿ ಆಗಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲರೂ ಒಂದು ತಂಡದಂತೆ ಸಮನ್ವಯದೊಂದಿಗೆ ಕೆಲಸ ಮಾಡಬೇಕೆಂದರು.
ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಘೋಷಿತವಾಗಿರುವ ಕೊಳಚೆ ಪ್ರದೇಶಗಳ ಕುರಿತು ಪ್ರಗತಿ ಪರಿಶೀಲಿಸಿದ ಸಚಿವರು, ಗ್ರಾಮೀಣ ಭಾಗದ ಕೊಳಚೆ ಪ್ರದೇಶಗಳಲ್ಲಿನ ಮನೆಗಳಿಗೆ ಹಕ್ಕುಪತ್ರ ನೀಡುವುದು ಹಾಗೂ ನಗರ ಪ್ರದೇಶದಲ್ಲಿನ ಕೊಳಚೆ ಪ್ರದೇಶಗಳಲ್ಲಿನ ಮನೆಗಳಿಗೆ 94 ಸಿ ಮತ್ತು ಸಿಸಿ ನೀಡುವ ಕುರಿತು ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.
ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಮಾತನಾಡಿ, ಶಿವಮೊಗ್ಗ ಮಹಾನಗರ ಪಾಲಿಕೆಯ ವಿವಿಧ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ ಒಡೆತನಕ್ಕೆ ಸೇರಿದ ನಿವೇಶನಗಳಲ್ಲಿ 40 ವರ್ಷಗಳಿಂದ ವಾಸ ಮಾಡುತ್ತಿರುವ ಬಡ ಕುಟುಂಬಗಳ ಮನೆಗಳನ್ನು ಸಕ್ರಮಗೊಳಿಸುವ ಸಂಬಂಧ 9000 ಅರ್ಜಿಗಳನ್ನು ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ ಸಿಇಓ ಹೇಮಂತ್ ಕುಮಾರ್.ಎನ್, ಸಿಸಿಎಫ್ ಹನುಮಂತಪ್ಪ, ಡಿಸಿಎಫ್ ಪ್ರಸನ್ನ ಕುಮಾರ್ ಪಟಗಾರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳ್ದಿದರು.
ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಜಿಲ್ಲೆಯು 6ನೇ ಸ್ಥಾನದಲ್ಲಿದೆ. ಶೇ.96 ಸಮೀಕ್ಷೆ ಮುಗಿದಿದ್ದು, ನಗರದಲ್ಲಿ ಇನ್ನು 8000 ಮನೆಗಳು ಹಾಗೂ ಜಿಲ್ಲೆಯಲ್ಲಿ ಸುಮಾರು 15 ಸಾವಿರ ಮನೆಗಳು ಸಮೀಕ್ಷೆಗೆ ಬಾಕಿ ಇದ್ದು, ಈ ಸಮೀಕ್ಷೆ ನಂತರ ಶರಾವತಿ ಸಂತ್ರಸ್ತರಿಗೆ ಸಂಬಂಧಿಸಿದಂತೆ ಬಂದಿರುವ ಆಕ್ಷೇಪಣೆಗಳನ್ನು ಆಲಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಡಿಸೆಂಬರ್ ನಂತರ ಮೀಸಲು ಅರಣ್ಯ ಕ್ಷೇತ್ರದ ಕುರಿತು ಪರಿಶೀಲನೆ ನಡೆಸಲಾಗುವುದು.
ಮಧುಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು