ವಸತಿ ನಿಗಮದಲ್ಲಿ ಲಂಚ ಆರೋಪ: ಸಚಿವ ಝಮೀರ್ ಅಹ್ಮದ್ ರಾಜೀನಾಮೆಗೆ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಒತ್ತಾಯ
ಶಿವಮೊಗ್ಗ, ಜೂ.23: ರಾಜೀವ್ ಗಾಂಧಿ ವಸತಿ ಯೋಜನೆಗೆ ಸಂಬಂಧಿಸಿ ಆಳಂದ ಶಾಸಕ ಬಿ.ಆರ್.ಪಾಟೀಲ್ ಮಾಡಿರುವ ಆರೋಪದ ಸತ್ಯ ಹೊರ ಬರಬೇಕಾದರೆ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಶಾಸಕರೇ ಸಚಿವರ ಮೇಲೆ ಈ ರೀತಿ ಆರೋಪ ಮಾಡುವುದರಿಂದ ಪಕ್ಷದಲ್ಲಿ ಗೊಂದಲ ಉಂಟಾಗುತ್ತದೆ. ಆರೋಪ ಸತ್ಯವೋ ಸುಳ್ಳೋ, ಸತ್ಯಾಂಶ ಹೊರಬರಬೇಕು. ಈ ಹಿನ್ನೆಲೆಯಲ್ಲಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸುವುದು ಸೂಕ್ತ ಎನ್ನುವುದು ತಮ್ಮ ಅಭಿಪ್ರಾಯ ಎಂದರು.
ಸಚಿವರ ಮೇಲೆ ಇಂತಹ ಆರೋಪಗಳು ಹೊಸದಲ್ಲ. ಈ ಹಿಂದೆ ನಾಗೇಂದ್ರ ಅವರ ಮೇಲೆ ಇಂತಹ ಆರೋಪ ಬಂದಾಗ ಮುಖ್ಯಮಂತ್ರಿಯ ಸಲಹೆಯಂತೆ ಅವರು ರಾಜೀನಾಮೆ ಕೊಟ್ಟರು. ಇಂತಹ ಹಲವು ಉದಾಹರಣೆಗಳಿವೆ. ಇದು ವಸತಿ ಸಚಿವರು ರಾಜೀನಾಮೆ ಕೊಡುವುದು ಸೂಕ್ತ ಎಂದು ಅವರು ಅಭಿಪ್ರಾಯಿಸಿದರು.
ಇದೇ ವೇಳೆ ಕೇಂದ್ರ ಸರಕಾರವು ರಸ ಗೊಬ್ಬರದ ಮೇಲಿನ ಬೆಲೆ ಹೆಚ್ಚಳ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ತಾವು ರೈತರ ಪರ ಎನ್ನುತ್ತಾರೆ. ಹಾಗಾದರೆ ಈಗ ರಸಗೊಬ್ಬರವನ್ನು ದುಬಾರಿ ಮಾಡಿ, ಯಾಕೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದರು ಎನ್ನುವುದನ್ನು ಬಹಿರಂಗ ಪಡಿಸಲಿ ಎಂದು ಒತ್ತಾಯಿಸಿದರು.
ರಾಷ್ಟ್ರ ಧ್ವಜ ವನ್ನು ಕೇಸರಿಕರಣ ಮಾಡಬೇಕೆನ್ನುವ ಹುನ್ನಾರ ನಡೆದಿದೆ. ಇದು ರಾಷ್ಟ್ರ ವಿರೋಧಿ ಕತ್ಯವಲ್ಲವೇ? ಮಾತೆತ್ತಿದರೆ ತಾವು ರಾಷ್ಠ್ರ ಭಕ್ತರು, ರಾಷ್ಟ್ರ ಪ್ರೇಮಿಗಳು ಎನ್ನುವವರೆ ಈಗ ರಾಷ್ಟ್ರ ಧ್ವಜವನ್ನು ಕೇಸರೀಕರಣ ಮಾಡಲು ಹೊರಟಿದ್ದಾರೆ. ಇದು ಖಂಡನೀಯ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ ಇದ್ದರು.