×
Ad

ಬಿಎಸ್‌ವೈ ಲಿಂಗಾಯಿತರಲ್ಲ ಶಾಸಕ ಯತ್ನಾಳ್ ಹೇಳಿಕೆ | ಸಂಸದ ರಾಘವೇಂದ್ರ ಅವರು ದಾಖಲೆ ಸಮೇತ ಉತ್ತರಿಸಲಿ : ಆಯನೂರು ಮಂಜುನಾಥ

Update: 2025-10-07 15:26 IST

ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಿಜವಾಗಿಯೂ ಲಿಂಗಾಯತರೇ ಅಲ್ಲ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದು, ಈ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಅವರು ತಮ್ಮ ಜಾತಿಯ ಬಗ್ಗೆ ದಾಖಲೆ ಸಹಿತ ಮಾಹಿತಿ ನೀಡಿ, ಗೊಂದಲ ನಿವಾರಿಸಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಸವಾಲು ಹಾಕಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಕಾರ್ಯಕ್ರದಮ ನಿಮಿತ್ತ ಶಿವಮೊಗ್ಗಕ್ಕೆ ವಿಜಯಪುರ ಶಾಸಕ ಬಸವನಗೌಡ ಯತ್ನಾಳ್ ಅವರು ಬಂದಿದ್ದರು. ಈ ವೇಳೆ ಭೇಟಿಯಾಗಿ ಚರ್ಚೆ ನಡೆಸಿದಾಗ, ಯತ್ನಾಳ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನಿಜವಾಗಿಯೂ ಲಿಂಗಾಯತರೇ ಅಲ್ಲ, ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ ಎಂದು ಹೇಳಿದ್ದರು. ಕಳೆದ 30 ವರ್ಷಗಳಿಂದ ಯಡಿಯೂರಪ್ಪನವರನ್ನು ನೋಡುತ್ತಾ ಬಂದವನಾದ ನನಗೆ ಈ ಮಾತು ಆಶ್ಚರ್ಯ ತಂದಿದೆ. ನನ್ನ ತಲೆಯಲ್ಲಿಯೇ ಪ್ರಶ್ನೆ ಉದ್ಭವಿಸಿದೆ ಎಂದರೆ, ಸಾಮಾನ್ಯ ಜನರಲ್ಲಿ ಇಂತಹ ಪ್ರಶ್ನೆ ಉದ್ಭವಿಸುವುದು ಸಹಜ. ಅಲ್ಲದೇ ಲಿಂಗಾಯತ ಸಮುದಾಯದಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದರು.

ಯತ್ನಾಳ್ ಪ್ರಶ್ನೆಗೆ, ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ದೇಶಕರಾಗಿರುವ ಸಂಸದ ಬಿ.ವೈ ರಾಘವೇಂದ್ರ ಅವರು ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದ ಅವರು, ಬಿಎಸ್‌ವೈ ಕುಟುಂಬವನ್ನು ವೀರಶೈವ ಲಿಂಗಾಯತರು ಎಂದು ನಂಬಿದ್ದೇವೆ. ಈ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ, ಆದ್ದರಿಂದ ಯತ್ನಾಳ್ ಪ್ರಶ್ನೆಗೆ ರಾಘವೇಂದ್ರ ಅವರು ದಾಖಲೆ ಸಮೇತ ಉತ್ತರಿಸಬೇಕು, ಅದನ್ನು ಬಿಟ್ಟು ಸೇತುವೆ, ಬ್ರಿಡ್ಜ್, ಟವರ್ ಬಗ್ಗೆ ಮಾತನಾಡುವುದಲ್ಲ ಎಂದು ಅವರು ಟೀಕಿಸಿದರು.

ಧರ್ಮದ ಕಾಲಂನಲ್ಲಿ ಏನು ಬರೆಸುತ್ತೀರಿ?:

ವೀರಶೈವ ಮಹಾಸಭಾದ ನಿರ್ದೇಶಕರು ದಾವಣಗೆರೆಯಲ್ಲಿ ಭಾಗಿಯಾಗಿ, ಸಮೀಕ್ಷೆಯ ಇತರೆ ಕಾಲಂನಲ್ಲಿ ಲಿಂಗಾಯತ ಶರ್ಮ ಎಂದು ಬರೆಸಬೇಕು ಎಂದು ನಿರ್ಣಯಿಸಿದ್ದಾರೆ. ಈ ಬಗ್ಗೆ ಬಿಎಸ್‌ವೈ ಆಗಲಿ ಅಥವಾ ಸಂಸದರಾಗಲಿ ಸ್ಪಷ್ಟನೆ ನೀಡಿಲ್ಲ. ಬಿಜೆಪಿಯಲ್ಲಿದ್ದಾಗ ಒಂದು ಹೇಳಿಕೆ ಮತ್ತು ವೀರಶೈವ ಮಹಾಸಭಾದಲ್ಲಿದ್ದಾಗ ಇನ್ನೊಂದು ನಿಲುವು ತಾಳುವ ಸಂಸದ ರಾಘವೇಂದ್ರ ಅವರು, ಜಾತಿ ಸಮೀಕ್ಷೆಯಲ್ಲಿ ಯಾವುದನ್ನು ಬರೆಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.

ವೀರಶೈವ ಲಿಂಗಾಯತರ ಓಲೈಕೆಗಾಗಿ ಸಂಸದರ ನಿಲುವು ಬೇರೆ ಇದೆ. ಅಖಿಲ ಭಾರತ ವೀರಶೈವ ಮಹಾಸಭಾ, ಯಡಿಯೂರಪ್ಪ ಮತ್ತು ಸಂಸದರು ಭಾಗಿಯಾಗಿದ್ದರೂ ‘ಹಿಂದೂ’ ಎಂದು ಬರೆಸಲು ಒತ್ತಾಯಿಸಲಿಲ್ಲ. ಆದರೆ ಈಗ ಬಿಜೆಪಿಗೆ ಬಂದು ವಿಜಯೇಂದ್ರ ಅವರು ‘ಹಿಂದೂ’ ಎಂದು ಬರೆಯುವಂತೆ ಹೇಳುತ್ತಾರೆ. ಮಹಾಸಭಾ ಮತ್ತು ಬಿಜೆಪಿಯಲ್ಲಿ ತಮ್ಮ ನಿಲುವನ್ನು ಗೊಂದಲಗೊಳಿಸಬೇಡಿ ಎಂದು ಅವರು ತಿಳಿಸಿದರು.

ಹೀಗಾಗಿ ಧರ್ಮದ ಕಾಲಂನಲ್ಲಿ ನೀವು ವೀರಶೈವ ಲಿಂಗಾಯಿತ ಅಂತ ಬರೆಸುತ್ತೀರಾ? ಅಥವಾ ಬಿಜೆಪಿ ಸಿದ್ದಾಂತದಂತೆ ಹಿಂದೂ ಎಂದು ಬರೆಸುತ್ತೀರಾ ಎಂದು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಸಂಸದರು ಗೊಂದಲಕ್ಕೆ ಒಳಗಾಗುವುದು ಬೇಡ :

ರಾಜ್ಯದಲ್ಲಿ ನಡೆಯುತ್ತಿರುವುದು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿ ಸಮೀಕ್ಷೆಯಾಗಿದ್ದು, ಇದರಲ್ಲಿ ಕೆಲವು ಪ್ರಶ್ನೆಗಳು ಅಪ್ರಸ್ತುತವಾಗಿರಬಹುದು, ಆದರೆ ವಿಪಕ್ಷಗಳು ಗೊಂದಲ ಸೃಷ್ಟಿಸುತ್ತಿವೆ. ಸಮೀಕ್ಷೆಯ ಉದ್ದೇಶದಲ್ಲಿ ಜಾತಿ ಒಂದು ಅಂಶವೇ ವಿನ:ಪ್ರಧಾನವಲ್ಲ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಸರ್ವೆಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬ ಸಂಸದ ಬಿ.ವೈ ರಾಘವೇಂದ್ರ ಹೇಳಿಕೆಯನ್ನು ಅಲ್ಲಗಳೆದ ಅವರು, ಶೆಡ್ಯೂಲ್ 7 ರಲ್ಲಿ ರಾಜ್ಯ ಸರ್ಕಾರ ಮಾಡಬಾರದು ಎಂದು ಎಲ್ಲಾದರೂ ಸಂವಿಧಾನದಲ್ಲಿದೆಯಾ? ಇದ್ದಿದ್ದರೆ ಹೈಕೋರ್ಟ್ ತಡೆಯಾಜ್ಞೆ ನೀಡುತ್ತಿತ್ತು. ಈ ಬಗ್ಗೆ ಸಂಸದರು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಒಳಗಾಗಬಾರದು ಎಂದರು.

ಕೇಂದ್ರ ಸಚಿವರಾಗಿ ಪ್ರಹ್ಲಾದ್ ಜೋಶಿ ಅವರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲ್ಲ ಎಂದು ಹೇಳಿಕೆ ನೀಡಿರುವುದು ಬೇಜವಾಬ್ದಾರಿಯಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕೇಂದ್ರ ಸಚಿವರು ನೀಡಿರುವ ಹೇಳಿಕೆ ಖಂಡನೀಯ. ಆದ್ದರಿಂದ ಅವರ ಮೇಲೆ ಸುಮೋಟೋ ಪ್ರಕರಣ ದಾಖಲಿಸಲು ಕ್ಯಾಬಿನೆಟ್ ಸೂಚಿಸಿದೆ ಎಂದು ಅವರು ತಿಳಿಸಿದರು.

ವಿಜಯೇಂದ್ರ-ರಾಘವೇಂದ್ರ ಕೋಟಾ ಯಾವುದು?:

ಮಧು ಬಂಗಾರಪ್ಪ ಅವರನ್ನು ಜಾತಿ ಕೋಟಾದ ಮೇಲೆ ಸಚಿವರನ್ನಾಗಿ ಮಾಡಲಾಗಿದೆ ಎಂದ ಸಂಸದ ರಾಘವೇಂದ್ರ ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ ಅವರು, ಯಾವುದೇ ರಾಜಕೀಯ ಹಿನ್ನಲೆ ಇರದ, ಸಂಘಟನೆಯಲ್ಲಿ ತೊಡಗಿಸಿಕೊಳ್ಳದ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ ಕೋಟಾ ಯಾವುದು?. ಕೇವಲ ಪುರಸಭೆ ಸದಸ್ಯರಾದ ರಾಘವೇಂದ್ರ ಅವರಿಗೆ ಎಂಪಿ ಟಿಕೆಟ್ ಪಡೆದುಕೊಂಡ ಕೋಟಾ ಯಾವುದು ಎಂದು ಪ್ರಶ್ನಿಸಿದರು.

ಯಾವುದೇ ಜಾತಿಯ ಕೋಟಾದಲ್ಲಿ ಮಧುಬಂಗಾರಪ್ಪನವರನ್ನು ಸಚಿವರನ್ನಾಗಿ ನೇಮಿಸಲಾಗಿಲ್ಲ, ಚುನಾವಣಾ ಸಂದರ್ಭದಲ್ಲಿ ಪ್ರಣಾಳಿಕೆ ಉಪಾಧ್ಯಕ್ಷರಾಗಿ ಮಾಡಿದ ಕೆಲಸವನ್ನು ಗುರುತಿಸಿ ಅವರನ್ನು ಮಂತ್ರಿಯನ್ನಾಗಿ ಮಾಡಲಾಗಿದೆ. ಬಿಎಸ್‌ವೈ ಅವರದ್ದು ಹೋರಾಟದ ಹಿನ್ನಲೆಯಲ್ಲಿ ಸಿಎಂ ಆಗಿದ್ದರು. ಆದರೆ, ವಿಜಯೇಂದ್ರ ಅವರದ್ದು ಯಾವ ಕೋಟಾ? ಬೇರೆಯವರ ಕೋಟಾ ಬಗ್ಗೆ ಪ್ರಶ್ನಿಸುವ ತಾವು ಮೊದಲು ತಮ್ಮ ಕೋಟಾ ಯಾವುದು ಎಂಬುದನ್ನು ಬಹಿರಂಗಪಡಿಸಿಬೇಕು ಎಂದು ಆಗ್ರಹಿಸಿದರು

ಟೋಲ್ ಹೋರಾಟಕ್ಕೆ ಸಂಸದ ರಾಘವೇಂದ್ರ ಅವರು ಬೆಂಬಲಿಸಿದ್ದಾರೆ. ಆದರೆ ಟೋಲ್ ಸ್ಥಾಪಿಸಿದವರು ಯಾರು?. ಟೋಲ್ ಕಂಬ ನೆಟ್ಟವರು ಯಾರು. ನೀವು 4 ಬಾರಿ ಸಂಂಸದರಾಗಿದ್ದೀರಾ. ನೀವು ಗೊಂದಲದಲ್ಲಿ ಇರಬಾರದು. ಜಾತಿ ಗಣತಿಯಲ್ಲಿ ಗೊಂದಲದ ನಿಲುವು ಹೊಂದಿರುವ ನೀವು ಟೋಲ್ ವಿಚಾರದಲ್ಲೂ ಗೊಂದಲದ ನಿಲುವು ತಾಳುವುದು ಸರಿಯಲ್ಲ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಮುಖಂಡರಾದ ಕಲಗೋಡು ರತ್ನಾಕರ್, ಜಿ.ಡಿ ಮಂಜುನಾಥ್, ಅಡ್ಡು, ರಮೇಶ್ ಶಂಕರಘಟ್ಟ, ವೈ.ಹೆಚ್ ನಾಗರಾಜ್, ಧೀರರಾಜ್ ಹೊನ್ನವಿಲೆ ಸೇರಿದಂತೆ ಹಲವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News