ಶಿವಮೊಗ್ಗದಲ್ಲಿ ಮುಂಗಾರು ಚುರುಕು: ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಳ
ಶಿವಮೊಗ್ಗ: ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಚುರುಕುಕೊಂಡಿದ್ದು, ಹೊಸನಗರ, ಸಾಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.
ಸಾಗರ ತಾಲೂಕಿನ ಕಾಂಡಿಕೆ, ಕಲ್ಮನೆ, ಕೋಳೂರು, ಭೀಮನಕೋಣೆ, ಭೀಮನೇರಿ, ಮಾಲ್ವೆ, ಕೆಳದಿ ಭಾಗದಲ್ಲಿ ವಿಪರೀತ ಮಳೆಯಾಗುತ್ತಿದೆ. ಇತ್ತ ಹೊಸನಗರ ತಾಲೂಕಿನ ಮಾರುತಿಪುರ, ಕೋಡೂರು, ಮುಂಬಾರು, ಮೇಲಿನಬೆಸಿಗೆ, ಹೊಸೂರು ಸಂಪೆಕಟ್ಟೆ ಭಾಗದಲ್ಲೂ ಭಾರಿ ಸುರಿಯುತ್ತಿದೆ.
ತೀರ್ಥಹಳ್ಳಿ ತಾಲೂಕಿನ ದೇಮ್ಲಾಪುರ, ಆರಗ, ನೆರಟೂರು, ಹೊಸಹಳ್ಳಿ, ಅರೆಹಳ್ಳಿ, ಹೊನ್ನೇತಾಳು, ಬಿದರಗೋಡು, ಆಗುಂಬೆ ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಭಾಂಡ್ಯ ಕುಕ್ಕೆ, ತ್ರಯಂಬಕಪುರ, ತೂದೂರು ಭಾಗದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುತ್ತಿದೆ.
ಮಳೆ ಬಿರುಸುಗೊಂಡಿದ್ದರಿಂದ ಜಿಲ್ಲೆಯ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೆಚ್ಚಾಗಿದೆ. ಭದ್ರಾ ಜಲಾಶಯದ ಒಳ ಹರಿವು ತುಸು ಏರಿಕೆಯಾಗಿದೆ. ಇಂದು ಜಲಾಶಯಕ್ಕೆ 5,417 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ.
ಭದ್ರಾ ಜಲಾಶಯದಲ್ಲಿ ಪ್ರಸಕ್ತ 144.9 ಅಡಿಯಷ್ಟು ನೀರಿನ ಸಂಗ್ರಹವಿದೆ. ಒಟ್ಟು 30.264 ಟಿಎಂಸಿ ನೀರಿದೆ. 1170 ಕ್ಯೂಸೆಕ್ ಹೊರಹರಿವು ಇದೆ. ಕಳೆದ ವರ್ಷ ಈ ಅವಧಿಯಲ್ಲಿ ನೀರಿನ ಮಟ್ಟ 118.11 ಅಡಿಯಷ್ಟಿತ್ತು.
ಲಿಂಗನಮಕ್ಕಿ ಒಳಹರಿವು ಹೆಚ್ಚಳ:
ಜಲನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಳವಾಗಿರುವ ಹಿನ್ನೆಲೆ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಏರಿಕೆಯಾಗಿದೆ. ಸೋಮವಾರ 39,961 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ.
ಕಳೆದ 24 ಗಂಟೆಯಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 2.65 ಅಡಿಯಷ್ಟು ಏರಿಕೆಯಾಗಿತ್ತು. ಪ್ರಸಕ್ತ 1766.40 ಅಡಿಯಷ್ಟು ನೀರಿನ ಸಂಗ್ರಹವಿದೆ. ಇನ್ನು, ಜಲಾಶಯದ ಹೊರ ಹರಿವು 3,012 ಕ್ಯೂಸೆಕ್ ಇದೆ.
ಲಿಂಗನಮಕ್ಕಿ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 151.64 ಟಿಎಂಸಿ. ಸದ್ಯ 35.01 ಟಿಎಂಸಿಯಷ್ಟು ನೀರಿನ ಸಂಗ್ರಹವಿದೆ. ಶೇ.23ರಷ್ಟು ಮಾತ್ರ ಜಲಾಯಶ ಭರ್ತಿಯಾಗಿದೆ.