×
Ad

ನಾಡಿಗೆ ಬೆಳಕು ನೀಡಿದವರಿಗೆ ಸೇತುವೆ ಕೊಡುಗೆ

Update: 2025-07-14 23:26 IST

ಶಿವಮೊಗ್ಗ : ಶರಾವತಿ ಹಿನ್ನೀರು ಭಾಗಕ್ಕೆ ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಯನ್ನು ಸೋಮವಾರ ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಯಿತು. ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಲೋಕಾರ್ಪಣೆಗೊಳಿಸುವ ಮೂಲಕ ದಶಕಗಳ ಕಾಯುವಿಕೆಗೆ ತೆರೆ ಎಳೆದರು.

ಈ ಸೇತುವೆ ದ್ವೀಪವಾಗಿದ್ದ ಗ್ರಾಮಗಳಿಗೆ ಸಂಪರ್ಕ ಬೆಸೆಯುವ ಕೊಂಡಿಯಾಗಿದೆ. ಈ ಅದ್ವೀಯ ಕ್ಷಣಕ್ಕಾಗಿ ದ್ವೀಪವಾಸಿಗಳು ಏಳು ದಶಕಗಳಿಂದ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಆ ಕ್ಷಣಕ್ಕೆ ಜು.14 ಸಾಕ್ಷಿಯಾಯಿತು. ದೇಶದ ಎರಡನೇ ಅತಿ ಉದ್ದದ ಕೇಬಲ್ ಆಧಾರಿತ ತೂಗು ಸೇತುವೆ, ರಾಜ್ಯದ ಮೊದಲ ಕೇಬಲ್ ಆಧಾರಿತ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಶರಾವತಿ ಹಿನ್ನೀರಿನ ಜನರ ಕಥೆ: 1939-40 ದಶಕದಲ್ಲಿ ಜೋಗದ ಬಳಿ ಜಲ ವಿದ್ಯುತ್ ಉತ್ಪಾದನೆಗಾಗಿ ಸಾಗರ ತಾಲೂಕಿನ ಮಡೆನೂರು ಬಳಿ ಶರಾವತಿ ನದಿಗೆ ಹಿರೇಭಾಸ್ಕರ ಹೆಸರಿನಲ್ಲಿ ಅಣೆಕಟ್ಟು ಕಟ್ಟಲಾಯಿತು. ಈ ಯೋಜನೆಯಿಂದ ಕರೂರು-ಭಾರಂಗಿ ಹೋಬಳಿ ಹಲವಾರು ಗ್ರಾಮಗಳು ಮುಳುಗಡೆಯಾದವು. ಇದರಿಂದ ಹಲವು ಗ್ರಾಮಗಳು ಶರಾವತಿ ಹಿನ್ನೀರಿನಲ್ಲಿ ದ್ವೀಪಗಳಾಗಿ ಬದಲಾದವು.

1964ರಲ್ಲಿ ಶರಾವತಿ ನದಿಗೆ ಅಡ್ಡವಾಗಿ ಲಿಂಗನಮಕ್ಕಿ ಅಣೆಕಟ್ಟು ಕಟ್ಟಿದ ಪರಿಣಾಮ ಅದರ ಹಿನ್ನೀರು ಸಾಗರ ತಾಲೂಕಿನ ಶರಾವತಿ ಕಣಿವೆಯನ್ನು 3 ಭಾಗವನ್ನಾಗಿಸಿತ್ತು. ನದಿಯ ಒಂದು ಬದಿಯಲ್ಲಿ ಉಳಿದವರು ನಾಗರಿಕ ಸೌಲಭ್ಯಗಳಿಂದ ವಂಚಿತರಾದರು. ಅವರು ಸಾಗರ ತಾಲೂಕು ಕೇಂದ್ರವನ್ನು ತಲುಪಬೇಕಾದರೆ ಸುಮಾರು 80ರಿಂದ 100 ಕಿ.ಮೀ. ರಸ್ತೆ ಮಾರ್ಗದಲ್ಲಿ ಸಾಗಬೇಕಾಯಿತು.

ನಾಡ ದೋಣಿಗಳೇ ಸಂಪರ್ಕ ಕೊಂಡಿ: ಶರಾವತಿ ಹಿನ್ನೀರಿನಲ್ಲಿ ನೀರು ಸಂಗ್ರಹ ಹೆಚ್ಚಾದ ಪರಿಣಾಮ ಕರೂರು-ಭಾರಂಗಿ ಹೋಬಳಿಗಳ ಸುಮಾರು 60ಕ್ಕೂ ಹೆಚ್ಚು ಹಳ್ಳಿಗಳ ಸುಮಾರು 20 ಸಾವಿರಕ್ಕೂ ಜನರು ಸಂಪರ್ಕದಿಂದ ವಂಚಿತರಾದರು. ಮನೆ-ಮಠ, ಹೊಲ, ಗದ್ದೆ, ತೋಟ, ಜಾನುವಾರುಗಳನ್ನು ಕಳೆದುಕೊಂಡು ಅಕ್ಷರಶಃ ನಿರಾಶ್ರಿತರಾದರು.

ಸಾಗರ ಪಟ್ಟಣ ಮತ್ತು ಹಿನ್ನೀರು ಪ್ರದೇಶದ ನಡುವೆ ನಾಡದೋಣಿಗಳೇ ಸಂಪರ್ಕ ಕೊಂಡಿಯಾದವು. ಈ ಹಿಂದೆ ಮದುವೆ ದಿಬ್ಬಣ ಹೊತ್ತು ಸಾಗುತ್ತಿದ್ದ ದೋಣಿ ಕರೂರು ಬಳಿ ಮಗುಚಿ ವಧು-ವರರ ಸಹಿತ ಬರೋಬ್ಬರಿ 23 ಜನರು ನೀರು ಪಾಲಾಗಿದ್ದರು. ದೋಣಿ ನಡೆಸಿದ ಅಂಬಿಗ ಮಾತ್ರ ಮಗುಚಿ ಬಿದ್ದ ದೋಣಿಯನ್ನು ಬಳಸಿಕೊಂಡು ತೇಲಿ ಬಂದು ದಡಸೇರಿ ಬದುಕುಳಿದ. ಹೊಳೆಬಾಗಿಲಿನ ದೋಣಿ ಕಂಡಿಯಲ್ಲಿ ನಡೆದ ಈ ’ದೋಣಿ ದುರಂತ’ವು ಇತಿಹಾಸ ಪುಟದಲ್ಲಿ ಮರೆಯಲಾರದ ದುರಂತ ಕಥೆ. ಸೇತುವೆ ಸಂಭ್ರಮದಲ್ಲಿ ದಶಕಗಳ ಹಿಂದೆ ನಡೆದು ಹೋದ ಈ ಘಟನೆ ನೆನೆದ ಹಿರಿಯರು ಈಗಲೂ ಕಣ್ಣೀರಾಗುತ್ತಾರೆ.

ಲಾಂಚ್ ಸೇವೆ: ಕರೂರು ಬಳಿ ನಡೆದ ದೋಣಿ ದುರಂತ ಸರಕಾರದ ಕಣ್ಣು ತೆರೆಸಿತು ಎಂದರೆ ತಪ್ಪಾಗಲಾರದು. 1969ರಲ್ಲಿ ಸರಕಾರ ಲಾಂಚ್ ವ್ಯವಸ್ಥೆಯನ್ನು ಕಲ್ಪಿಸಿತು. ಎರಡು ಲಾಂಚ್‌ಗಳ ವ್ಯವಸ್ಥೆ ಇದ್ದರೂ ಸಂಜೆ 6 ಗಂಟೆ ನಂತರ ಲಾಂಚ್ ಸೇವೆ ಸ್ಥಗಿತಗೊಳ್ಳುತ್ತಿತ್ತು. ಲಾಂಚ್ ಸೇವೆ ಇದ್ದರೂ ತುರ್ತು ಸೇವೆಗಳಿಗಾಗಿ ಪರದಾಡುತ್ತಿದ್ದರು. ದ್ವೀಪದ ಭಾಗದಲ್ಲಿ ಏನೇ ಅನಾಹುತ, ಅವಘಡ ನಡೆದರೂ ಸಂಜೆ 6 ಗಂಟೆ ಬಳಿಕ ತಾಲೂಕು ಕೇಂದ್ರ ಸಾಗರ ಪಟ್ಟಣಕ್ಕೆ ಹೋಗಲು ಸಾಧ್ಯವಾಗುತ್ತಿರಲಿಲ್ಲ.

ಹೆರಿಗೆ ನೋವು ಬಂದರೆ, ಅನಾರೋಗ್ಯಕ್ಕೆ ತುತ್ತಾದರೆ ಬೆಳಕು ಹರಿಯುವ ತನಕ ಕಾಯಬೇಕಾದ ಪರಿಸ್ಥಿತಿ ಇತ್ತು. ಮಕ್ಕಳ ಶಿಕ್ಷಣಕ್ಕೆ ಸಾಗರಕ್ಕೆ ಹೋಗಬೇಕಾಗಿತ್ತು. ಬಹಳ ತುರ್ತು ಪರಿಸ್ಥಿತಿಯಲ್ಲಿ 40 ಕಿ.ಮೀ. ದೂರದ ಸಾಗರ ಪಟ್ಟಣಕ್ಕೆ ಹೋಗಬೇಕಾದರೆ ಕಾರ್ಗಲ್-ಕೋಗಾರು ಮೂಲಕ 110 ಕಿ.ಮೀ. ಸುತ್ತಿ ಬಳಸಿ ಹೋಗಬೇಕಿತ್ತು ಎಂದರೆ ದ್ವೀಪದ ನಿವಾಸಿಗಳ ಜೀವನ ಊಹಿಸಲು ಅಸಾಧ್ಯವಾಗಿತ್ತು.

ಹೋರಾಟದ ಹೆಜ್ಜೆ ಗುರುತುಗಳು: ನಾಡಿಗೆ ಬೆಳಕು ನೀಡಲು ತ್ಯಾಗ ಮಾಡಿದ ಜನರು ಅಕ್ಷರಶಃ ನಾಗರಿಕ ಸೌಲಭ್ಯದಿಂದ ವಂಚಿತರಾಗಿದ್ದಾರೆ.ದ್ವೀಪದ ಜನರ ಸಂಪರ್ಕ ಕಲ್ಪಿಸುವಂತೆ ಶರಾವತಿ ನದಿಗೆ ಸೇತುವೆ ಬೇಕೆಂದು ಆಗ್ರಹಿಸಿ ನಾನಾ ವಿಧದ ಹೋರಾಟಗಳೂ ನಡೆದವು.

ಶರಾವತಿ ನದಿಗೆ ಲಿಂಗನಮಕ್ಕಿ ಜಲಾಶಯ ನಿರ್ಮಾಣ ಮಾಡಿ ಅಲ್ಲಿ ಉತ್ಪಾದಿಸುವ ವಿದ್ಯುತ್‌ನಿಂದಾಗಿ ಜಗತ್ತು ಬೆಳಗುತ್ತಿದೆ. ಅದರಿಂದ ಸರಕಾರ ಸಾವಿರಾರು ಕೋಟಿ ರೂ. ಆದಾಯ ಗಳಿಸಿದೆ. ಆದರೆ, ತ್ಯಾಗ ಮಾಡಿದ ಜನರಿಗೆ ಸೇತುವೆ ಸಂಪರ್ಕ ಕಲ್ಪಿಸದೆ ಅನ್ಯಾಯ ಎಸಗಿದೆ ಎಂಬ ಅಪವಾದ ಕೇಳಿ ಬಂದಿತು.

ಹೀಗಾಗಿ ಕಳಸವಳ್ಳಿ-ಅಂಬಾರಗೊಡ್ಲು ಸೇತುವೆ ನಿರ್ಮಾಣದ ಹಿಂದೆಯೂ ಒಂದು ದೊಡ್ಡ ಜನಾಗ್ರಹವೇ ಇತ್ತು. ಈ ಒಂದು ಹೋರಾಟಕ್ಕೆ ಮಹಾಪೋಷಕನಂತೆ ಕಾರ್ಯ ನಿರ್ವಹಿಸಿರುವುದು ಶೀ ಕ್ಷೇತ್ರ ಸಿಗಂದೂರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಕಾಲದಿಂದಲೇ ಇಲ್ಲಿ ಸೇತುವೆಯಾಗಬೇಕೆಂಬ ಚರ್ಚೆ, ಬೇಡಿಕೆಗಳು ನಡೆಯುತಿದ್ದವು. ರಾಜಕೀಯ ಮುತ್ಸದ್ದಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಬಳಿಕ ಬಂದ ಶಾಸಕ ಬೇಳೂರು ಗೋಪಾಲಕೃಷ್ಣ, ಹರತಾಳು ಹಾಲಪ್ಪ ಅವರ ಹೋರಾಟವನ್ನೂ ಅಲ್ಲಗಳೆಯಲಾಗದು. ಆಯಾ ಪಕ್ಷ ಮತ್ತು ಸರಕಾರದ ಕಾಲಘಟ್ಟದಲ್ಲಿ ಎಲ್ಲರೂ ತಮ್ಮ ನೆಲೆಯಲ್ಲಿ ಪ್ರಯತ್ನ ಮಾಡಿದ್ದಾರೆ. ಹೊಳೆಬಾಗಿಲು ಸೇತುವೆ ಹೋರಾಟ ಸಮಿತಿಯನ್ನು ಕಟ್ಟಿಕೊಂಡು ಕೆರೆಕೈ ಪ್ರಸನ್ನ ಅವರು ಆ ಭಾಗದಲ್ಲಿ ಸೇತುವೆಗಾಗಿ ಜನರನ್ನು ಜಾಗೃತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿ.ಆರ್.ಜಯಂತ್, ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿ ಗುರುಮೂರ್ತಿ, ಜಡ್ಡಿನ ಬೈಲು ಪಟೇಲರು, ಹುರಳಿ ಹೂವಣ್ಣ, ದಿ.ಕಾಗೋಡು ಅಣ್ಣಾಜಿ, ದಿ.ಹುರಳಿ ನಾಗಪ್ಪ ನಾಯ್ಕ, ಬೀಮನೇರಿ ಶಿವಪ್ಪ, ಟಿ.ಡಿ.ಮೇಘರಾಜ್, ಮಲ್ಲಿಕಾರ್ಜುನ್ ಹಕ್ರೆ, ಜನಪರ ಹೋರಾಟಗಾರ ಜಿ.ಟಿ.ಸತ್ಯನಾರಾಯಣ, ಗಂಟೆ ಹರೀಶ್, ನಾಗರಾಜ್ ಜೈನ್, ದೇವರಾಜಗೌಡ, ವಕೀಲ ಕೆ.ದಿವಾಕರ್, ಅರೆಕಲ್ಲು ಶ್ರೀಧರ್, ಹಾಲ್ಕೆರೆ ಮಧುರಾ, ಶಾಂತರಾಜ್ ಜೈನ್, ಅ.ನಾ. ಚಂದ್ರಶೇಖರ್ ಸೇರಿದಂತೆ ಹೋರಾಟದ ಹಾದಿಯಲ್ಲಿ ಸಾಗಿದ ಎಲ್ಲರನ್ನು ಈ ಸಂದರ್ಭ ಸ್ಮರಿಸಲೇಬೇಕು.

473 ಕೋಟಿ ರೂ. ವೆಚ್ಚದಲ್ಲಿ ಶರಾವತಿ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಂಬಾರಗೊಡ್ಲು-ಕಳಸವಳ್ಳಿ ಸೇತುವೆ ದೇಶದ 2ನೇ ಅತಿ ಉದ್ದದ ಹಾಗೂ ರಾಜ್ಯದ ಮೊದಲ ಕೇಬಲ್ ಆಧಾರಿತ ಸೇತುವೆ ಎಂದು ಪ್ರಖ್ಯಾತಿ ಪಡೆದುಕೊಂಡಿದೆ.

ಈ ಸೇತುವೆ 2.44 ಕಿ.ಮೀ. ಉದ್ದ (ಇದರಲ್ಲಿ 740 ಮೀ. ಮಾತ್ರ ಕೇಬಲ್ ಸೇತುವೆ), ದ್ವಿಪಥ ಹೊಂದಿದೆ. 3 ಕಡೆ 1.5 ಮೀಟರ್ ಅಗಲದ ಪುಟ್ ಪಾತ್ ಕೂಡ ಇದೆ. 140 ಮೀ. ಅಂತರವನ್ನು 4 ಫೌಂಡೇಶನ್ ಮೇಲೆ ಕವರ್ ಮಾಡಲಾಗಿದೆ. ಪ್ರತಿ ಪಿಲ್ಲರ್ ಫೌಂಡೇಶನ್ 177 ಮೀ. ಅಂತರ ಇದೆ. ಈ ಸೇತುವೆಗೆ 30 ಮೀ. ಅಂತರದಲ್ಲಿ 80 ಪಿಲ್ಲರ್ ಫೌಂಡೇಷನ್ ಹಾಕಬೇಕಿತ್ತು. ಆದರೆ, ಇದನ್ನು 19 ಪಿಲ್ಲರ್ ಫೌಂಡೇಷನ್‌ನಲ್ಲಿ ಮುಗಿಸಲಾಗಿದೆ. 177, 105, 93 ಮೀ. ಅಂತರದಲ್ಲಿ ಪಿಲ್ಲರ್‌ಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶರತ್ ಪುರದಾಳ್

contributor

Similar News