×
Ad

ಕಾನೂನುಬಾಹಿರ ಬಡ್ಡಿ ವ್ಯವಹಾರ ನಡೆಸುತ್ತಿರುವ ಆರೋಪ : ಶಿವಮೊಗ್ಗ ನಗರದ ವಿವಿಧೆಡೆ ಮನೆಗಳ ಮೇಲೆ ಪೊಲೀಸರ ದಾಳಿ

Update: 2025-02-11 20:38 IST

ಶಿವಮೊಗ್ಗ: ಕಾನೂನುಬಾಹಿರವಾಗಿ ಬಡ್ಡಿ ವ್ಯವಹಾರ ನಡೆಸುತ್ತಿರುವ ಆರೋಪ ಸಂಬಂಧ ಶಿವಮೊಗ್ಗ ನಗರದ ವಿವಿಧೆಡೆ ಬಡ್ಡಿ ವ್ಯವಹಾರ ಮಾಡುತ್ತಿದ್ದವರ ಮನೆಗಳ ಮೇಲೆ ಪೊಲೀಸರು ಮಂಗಳವಾರ ದಿಢೀರ್ ದಾಳಿ ಮಾಡಿ ಪರಿಶೀಲನೆ ನಡೆಸಿ‌ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಒಟ್ಟು 9 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. 39 ಲಕ್ಷ ನಗದು, 24 ಮೊಬೈಲ್ ಪೋನ್, 2 ಲ್ಯಾಪ್‌ಟ್ಯಾಪ್, 72 ಚೆಕ್‌ಗಳು, 19 ಆರ್.ಸಿ.ಬುಕ್ ಗಳು, 7 ವೆಹಿಕಲ್ ಬಾಂಡ್, ಅಗ್ರಿಮೆಂಟ್ ಪ್ರತಿ, ಪಾಸ್ ಬುಕ್, ಸೇಲ್ ಡೀಡ್, ಪಹಣಿ,  29 ಬೈಕ್‌ಗಳು ಮತ್ತು 2 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. 9 ಆರೋಪಿಗಳ ವಿರುದ್ದ 9 ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಅಣ್ಣಾನಗರ, ಮಾರ್ನಾಮಿ ಬೈಲು, ಕಾಮಾಕ್ಷಿ ಬೀದಿಯಲ್ಲಿನ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಉಳಿದಂತೆ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ವಿದ್ಯಾನಗರ, ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಶೀಪುರ, ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವನಗುಡಿ, ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಿಶೆಟ್ಟಿಕೊಪ್ಪ ಹಾಗೂ ಚಾಲುಕ್ಯನಗರ, ಗ್ರಾಮಾಂತರ ಠಾಣೆ ವ್ಯಾಪ್ತಿಯ ಇಂದಿರಾನಗರ ಹಾಗೂ ಗುರುಪುರದಲ್ಲಿರುವ ಅಕ್ರಮ ಬಡ್ಡಿ ವ್ಯವಹಾರ ನಡೆಸುತ್ತಿದ್ದವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಎ.ಜಿ. ಕಾರ್ಯಪ್ಪ, ಡಿವೈಎಸ್ಪಿಗಳಾದ ಬಾಬು ಆಂಜನಪ್ಪ, ಸಂಜೀವ್ ಕುಮಾರ್, ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್‌ಗಳಾದ ರವಿ ಪಾಟೀಲ್, ಹರೀಶ್ ಪಾಟೀಲ್, ಸಿದ್ದೇಗೌಡ, ಚಂದ್ರಕಲಾ, ಕೆ.ಟಿ. ಗುರುರಾಜ್, ಸತ್ಯನಾರಾಯಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News