ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅರಣ್ಯ ಸಲಹಾ ಸಮಿತಿ ಆಕ್ಷೇಪ
ಶಿವಮೊಗ್ಗ: ರಾಜ್ಯ ಸರಕಾರದ ಬಹುನಿರೀಕ್ಷಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ಅರಣ್ಯ ಸಚಿವಾಲಯದ ಅಧೀನದ ಅರಣ್ಯ ಸಲಹಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೇ, ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ರಾಜ್ಯ ಸರಕಾರದಿಂದ ವಿವರಣೆ ಕೇಳಿದೆ ಎಂದು ವರದಿಯಾಗಿದೆ.
ಶರಾವತಿ ಸಿಂಹ ಬಾಲದ ಸಿಂಗಳೀಕ ಅಭಯಾರಣ್ಯದಲ್ಲಿ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಷರತ್ತುಬದ್ದ ಅನುಮತಿ ಕೊಟ್ಟಿದ್ದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯು, ಅರಣ್ಯ ಸಲಹಾ ಸಮಿತಿಯಿಂದಲೂ ಒಪ್ಪಿಗೆ ಪಡೆಯುವಂತೆ ನಿರ್ದೇಶನ ನೀಡಿತ್ತು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪ್ರಸ್ತಾವದಲ್ಲಿ ಪ್ರಮುಖ ಹಾಗೂ ನಿರ್ಣಾಯಕ ವಿವರಗಳೇ ಇಲ್ಲ ಎಂದು ಅಭಿಪ್ರಾಯಪಟ್ಟಿರುವ ಸಮಿತಿ, ಯೋಜನೆಯ ಒಟ್ಟು ಪರಿಣಾಮ, ಜಲಾನಯನ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಮುಂಬರುವ ಜಲವಿದ್ಯುತ್ ಯೋಜನೆಗಳು, ಜಲಾನಯನ ಪ್ರದೇಶದ ಧಾರಣಾ ಶಕ್ತಿ ಸಾಮರ್ಥ್ಯದ ಬಗ್ಗೆ ಪ್ರಸ್ತಾವದಲ್ಲಿ ಬೆಳಕು ಚೆಲ್ಲಿಲ್ಲ. ಹೀಗಾಗಿ, ಕರ್ನಾಟಕ ವಿದ್ಯುತ್ ನಿಗಮವು ಪರಿಸರ ಪರಿಣಾಮ ಮೌಲ್ಯಮಾಪನದ ಭಾಗವಾಗಿ ಈ ಎರಡೂ ಅಧ್ಯಯನಗಳನ್ನು ಕೈಗೆತ್ತಿಕೊಳ್ಳುವುದು ಸೂಕ್ತ ಎಂದು ಹೇಳಿದೆ.
ಕೇಂದ್ರ ಜಲಶಕ್ತಿ ಸಚಿವಾಲಯದ ಅಧೀನದ ನೀರು ಹಾಗೂ ಇಂಧನ ಸಲಹಾ ಸಂಸ್ಥೆಯು ಈ ಹಿಂದೆ ನಡೆಸಿದ ಪರಿಸರ ಪರಿಣಾಮಗಳ ಮೌಲ್ಯಮಾಪನ ವರದಿಯು ಸಮಗ್ರವಾಗಿಲ್ಲ. ಯೋಜನೆಯಿಂದ ಸಸ್ಯ ಸಂಪತ್ತು ಹಾಗೂ ಕಾಡುಪ್ರಾಣಿಗಳ ಮೇಲಾಗುವ ಪರಿಣಾಮದ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ಸಮಿತಿ ತಿಳಿಸಿದೆ.
ಅರಣ್ಯ ನಾಶಕ್ಕೆ ಕಾರಣವಾಗುವ ಈ ಯೋಜನೆಗೆ ಒಪ್ಪಿಗೆ ಕೊಡಬಾರದು ಎಂದು ಅರಣ್ಯ ಸಚಿವಾಲಯದ ಪ್ರಾದೇಶಿಕ ಕಚೇರಿಯ ಉಪ ಅರಣ್ಯ ಮಹಾನಿರ್ದೇಶಕರ (ಡಿಐಜಿಎಫ್) ಸ್ಥಳ ಪರಿಶೀಲನಾ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಈ ವರದಿಯಲ್ಲಿನ ಅಂಶಗಳನ್ನು ಉಲ್ಲೇಖಿಸಿರುವ ಸಮಿತಿಯು, ಗೇರುಸೊಪ್ಪದಿಂದ ತಳಕೊಪ್ಪಕ್ಕೆ ನಿರ್ಮಿಸಲಾಗಿರುವ ವಿದ್ಯುತ್ ಪ್ರಸರಣಾ ಮಾರ್ಗವು 1980ರ ಅರಣ್ಯ ಕಾಯ್ದೆಯ ಉಲ್ಲಂಘನೆ ಎಂದು ಸ್ಪಷ್ಟವಾಗಿ ಸಮಿತಿ ಹೇಳಿದೆ.
ಇದಲ್ಲದೆ, 12.3 ಕಿ.ಮೀ ಭೂಗತ ರಸ್ತೆ ನಿರ್ಮಿಸುವ ಮೂಲಕ 12,000 ಮರಗಳನ್ನು ಕಡಿಯುವುದನ್ನು ತಪ್ಪಿಸಲು ಪರ್ಯಾಯ ಮಾರ್ಗಗಳನ್ನು ಅನ್ವೇಷಿಸುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ನೀಡಿರುವ ಸೂಚನೆಯನ್ನು ಪಾಲಿಸುವಂತೆ ರಾಜ್ಯ ಸರಕಾರಕ್ಕೆ ಸಮಿತಿ ಸೂಚಿಸಿದೆ.