×
Ad

ಶಿವಮೊಗ್ಗ : ವಾಟ್ಸಾಪ್ ನಲ್ಲಿ ಬಂದ ಮೆಸೇಜ್ ನಂಬಿ 12.69 ಲಕ್ಷ ರೂ. ಕಳೆದುಕೊಂಡ ಉಪನ್ಯಾಸಕಿ

Update: 2024-02-06 16:24 IST

ಶಿವಮೊಗ್ಗ:ಯುಟ್ಯೂಬ್, ಗೂಗಲ್ ಮ್ಯಾಪ್‌ನಲ್ಲಿ ರೆಸ್ಟೋರೆಂಟ್‌ಗಳಿಗೆ ರಿವ್ಯೂ ಬರೆದು ಹಣ ಸಂಪಾದಿಸಬಹುದು ಎಂದು ವಾಟ್ಸಾಪ್ ನಲ್ಲಿ ಬಂದ ಮೆಸೇಜ್ ನಂಬಿ ಉಪನ್ಯಾಸಕಿಯೊಬ್ಬರು 12.69 ಲಕ್ಷ ರೂ. ಕಳೆದುಕೊಂಡಿರುವ ಘಟನೆ ವರದಿಯಾಗಿದೆ.

ಜ.22ರಂದು ವಾಟ್ಸಾಪ್ ನಲ್ಲಿ ಬಂದ ಮೆಸೇಜ್‌ ಲಿಂಕ್ ಕ್ಲಿಕ್ ಮಾಡಿದ್ದ ಉಪನ್ಯಾಸಕಿ ಟೆಲಿಗ್ರಾಂನಲ್ಲಿ ಡೈಲಿ ಟಾಸ್ಕ್ ಮತ್ತು ರಿಸೆಪ್ಷನಿಸ್ಟ್ ಪ್ರಿಯಾ ಎಂಬ ಗ್ರೂಪ್‌ಗಳಿಗೆ ಜಾಯಿನ್ ಆಗಿದ್ದರು. ಪ್ರತಿ ರಿವ್ಯೂಗೆ 50 ರೂ.ನಂತೆ ನಿತ್ಯ 2 ಸಾವಿರದಿಂದ 2700 ರೂ.ವರೆಗು ಪಡೆಯಬಹುದು. ಅಲ್ಲಿ ಒದಗಿಸಿದ ರೆಸ್ಟೋರೆಂಟ್‌ನ ಯುಟ್ಯೂಬ್ ಮತ್ತು ಗೂಗಲ್ ಮ್ಯಾಪ್ ಲಿಂಕ್‌ನಲ್ಲಿ ರಿವ್ಯು ಬರೆದಿದ್ದರು ಎನ್ನಲಾಗಿದೆ.

ಬಳಿಕ ಉಪನ್ಯಾಸಕಿಯ ಬ್ಯಾಂಕ್ ಖಾತೆಗೆ 100 ರೂ.ನಿಂದ 225 ರೂ.ವರೆಗೆ 17 ಬಾರಿ ಹಣ ಬಂದಿತ್ತು. ನಂತರ 1 ಸಾವಿರ ರೂ. ಹೂಡಿಕೆ ಮಾಡಿದರೆ 1300 ರೂ., 3 ಸಾವಿರ ರೂ. ಹೂಡಿಕೆಗೆ 3900 ರೂ. ನೀಡುವುದಾಗಿ ಟೆಲಿಗ್ರಾಂ ಮೂಲಕ ತಿಳಿಸಲಾಗಿತ್ತು.

ಉಪನ್ಯಾಸಕಿಯ ವಿಶ್ವಾಸ ಸಂಪಾದಿಸಿದ ವಂಚಕರು ದೊಡ್ಡ ಮೊತ್ತದ ಹೂಡಿಕೆ ಮಾಡಿ, ಲಾಭ ಪಡೆಯುವಂತೆ ಪುಸಲಾಯಿಸಿದ್ದರು. ಜ.25 ರಿಂದ 29ರವರೆಗೆ ವಿವಿಧ ಬ್ಯಾಂಕ್ ಖಾತೆ, ಯುಪಿಐ ಐಡಿಗೆ ಒಟ್ಟು 12.69 ಲಕ್ಷ ರೂ. ಹಣ ಹಾಕಿಸಿಕೊಂಡಿದ್ದರು. ಆದರೆ ಆ ಹಣವಾಗಲಿ, ಲಾಭಾಂಶವಾಗಲಿ ಉಪನ್ಯಾಸಕಿಯ ಖಾತೆಗೆ ಮರಳಲಿಲ್ಲ. ವಂಚನೆಗೊಳಗಾದ ಅರಿವಾಗುತ್ತಿದ್ದಂತೆ ಉಪನ್ಯಾಸಕಿ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News