×
Ad

ಶಿವಮೊಗ್ಗ | ಅಕ್ರಮ ಮರಳು ದಂಧೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ಶಾಸಕರ ಪುತ್ರನೆಂದು ಹೇಳಿಕೊಂಡ ವ್ಯಕ್ತಿಯಿಂದ ನಿಂದನೆ; ವಿಡಿಯೋ ವೈರಲ್‌

Update: 2025-02-11 13:39 IST

ಶಿವಮೊಗ್ಗ : ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ದಾಳಿ ನಡೆಸಿದ ಸಂದರ್ಭದಲ್ಲಿ ಜಿಲ್ಲೆಯ ಶಾಸಕರೊಬ್ಬರ ಪುತ್ರನೆಂದು ಹೇಳಿಕೊಂಡ ವ್ಯಕ್ತಿಯಿಂದ ಮೊಬೈಲ್ ಮೂಲಕ ಮಹಿಳಾ ಅಧಿಕಾರಿ ವಿರುದ್ಧ ಅಶ್ಲೀಲ ಪದ ಬಳಸಿ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಮಹಿಳಾ ಅಧಿಕಾರಿ ವಿರುದ್ಧ ಅಶ್ಲೀಲ ಪದ ಬಳಸಿ ಹರಿಹಾಯ್ದ 47 ಸೆಕೆಂಡ್ ಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಆರ್‌ಎಸ್ ಪಕ್ಷದ ಸಂಸ್ಥಾಪಕ ರವಿಕೃಷ್ಣಾ ರೆಡ್ಡಿ ಅವರು, ಸೋಮವಾರ ಫೇಸ್‌ಬುಕ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದು, ಪೊಲೀಸರು ಶಾಸಕರ ಪುತ್ರನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು. ಮಹಿಳಾ ಅಧಿಕಾರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಘಟನೆ ಮೂರಾಲ್ಕು ದಿನಗಳ ಹಿಂದೆ ನಡೆದಿರಬಹುದು ಎನ್ನಲಾಗುತ್ತಿದೆ. ಮಹಿಳಾ ಅಧಿಕಾರಿ ಅಕ್ರಮ ಮರಳುಗಾರಿಕೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅಲ್ಲಿದ್ದ ವ್ಯಕ್ತಿಯೊಬ್ಬ ಯಾರಿಗೋ ಫೋನ್ ಮಾಡಿ ನಡೆದಿರುವ ಘಟನೆ ವಿವರಿಸುತ್ತಾನೆ. ಅತ್ತ ಕಡೆಯಿಂದ ಮಾತನಾಡುತ್ತಿದ್ದ ವ್ಯಕ್ತಿಯು ಅಧಿಕಾರಿಗೆ ಪೋನ್ ಕೊಡು ಎನ್ನುತ್ತಾನೆ. ಆದರೆ ಮಹಿಳಾ ಅಧಿಕಾರಿ ನನ್ನ ಫೋನ್‌ಗೆ ಕರೆ ಮಾಡಲು ತಿಳಿಸಿ ಎಂದು ಮಾತನಾಡಲು ನಿರಾಕರಿಸುತ್ತಾರೆ. ಆಗ ಸ್ಥಳದಲ್ಲಿದ್ದ ವ್ಯಕ್ತಿ ಸ್ಪೀಕರ್ ಆನ್ ಮಾಡುತ್ತಾನೆ. ಅತ್ತ ಕಡೆಯಿಂದ ಅಶ್ಲೀಲ ಪದ ಬಳಸಿ ಮಹಿಳಾ ಅಧಿಕಾರಿಯನ್ನು ಬೈಯ್ಯಲಾಗುತ್ತದೆ. ಅಧಿಕಾರಿ ಪ್ರತಿರೋಧ ತೋರಿದರೂ ಅಶ್ಲೀಲ ಪದ ಬಳಕೆ ಮುಂದುವರಿಯುತ್ತದೆ. ರವಿಕೃಷ್ಣಾ ರೆಡ್ಡಿ ಇದನ್ನು ಪೋಸ್ಟ್ ಮಾಡಿದ ಬಳಿಕ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. ಮೂಾಲ್ಕು ದಿನ ಕಳೆದರೂ ಮಹಿಳಾ ಅಧಿಕಾರಿ ತನ್ನ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದವರ ವಿರುದ್ಧ ದೂರು ದಾಖಲಿಸಿಲ್ಲ. ಹೀಗಾಗಿ ರಾಜಕೀಯ ಒತ್ತಡ ಕೆಲಸ ಮಾಡಿರಬಹುದು ಎನ್ನಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News