×
Ad

ಶಿವಮೊಗ್ಗ: ಮುಜರಾಯಿ ಇಲಾಖೆಯ ಚೆಕ್ ಬೌನ್ಸ್; ಬೇಸರ ವ್ಯಕ್ತಪಡಿಸಿದ ಅರ್ಚಕ

Update: 2025-08-01 10:30 IST

ಶಿವಮೊಗ್ಗ: ತುಂಗಾ ಭದ್ರ ಸಂಗಮದ ಶ್ರೀಕ್ಷೇತ್ರ ಕೂಡ್ಲಿಯ ಮುಜರಾಯಿ ಇಲಾಖೆಗೆ ಒಳಪಟ್ಟ ಶ್ರೀ ಪಾರ್ವತಿ ಬ್ರಹ್ಮೇಶ್ವರ ದೇವಸ್ಥಾನದ ಅರ್ಚಕರಿಗೆ ನೀಡಿದ್ದ ಇಲಾಖೆ ಚೆಕ್ ಅಮಾನ್ಯ (ಬೌನ್ಸ್) ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನದ ಅರ್ಚಕ ಕೆ.ಆರ್.ಆನಂದ್ ಅವರಿಗೆ ಮೂರು ತಿಂಗಳ ವೇತನ ಹಾಗೂ ಇತರ ನಿರ್ವಹಣೆ ವೆಚ್ಚ ಸೇರಿ ಒಟ್ಟು 35,900 ರೂ. ಮೌಲ್ಯದ ಚೆಕ್ ಅನ್ನು ಜು.1 ದಿನಾಂಕ ನಮೂದು ಮಾಡಿ ಶಿವಮೊಗ್ಗ ತಹಸೀಲ್ದಾರ್ ಅವರ ಸೀಲು ಸಹಿ ಮಾಡಿರುವ ಚೆಕ್ ನೀಡಲಾಗಿತ್ತು.

ಇತ್ತೀಚೆಗೆ ನಗದೀಕರಣಕ್ಕೆ ಸದರಿ ಚೆಕ್ ಅನ್ನು ಕೂಡ್ಲಿ ಕರ್ನಾಟಕ ಬ್ಯಾಂಕಿಗೆ ನೀಡಲಾಗಿತ್ತು. ಆದರೆ ಚೆಕ್ ನೀಡಲಾಗಿದ್ದ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದೆ ಇರುವುದರಿಂದ ಅಮಾನ್ಯಗೊಂಡಿದೆ ಎಂದು ಬ್ಯಾಂಕಿನಿಂದ ಹಿಂಬರಹ ನೀಡಿ ಚೆಕ್ ವಾಪಾಸ್ಸು ನೀಡಿದ್ದಾರೆ.

ಸರಕಾರಿ ಇಲಾಖೆಯೊಂದರ ಖಾತೆಯಲ್ಲಿ ಹಣ ಇಲ್ಲದೆ ಇರುವುದು ಮುಜರಾಯಿ ಇಲಾಖೆ ಹಾಗೂ ಸರಕಾರಕ್ಕೆ ಮುಜುಗರಕ್ಕೀಡು ಮಾಡಿದೆ. ಪ್ರಾಮಾಣಿಕವಾಗಿ ಸೇವೆ ಮಾಡಿದರೂ ಕೂಡ ಸರಕಾರ ನಿಗದಿಪಡಿಸಿದ ಹಣ ನೀಡಲು ತಾಲೂಕು ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಲ್ಲಸಲ್ಲದ ದಾಖಲೆಗಳು ನೀಡುವಂತೆ ಅಲೆಸುತ್ತಾರೆ.

ನಮ್ಮ ಎಲ್ಲಾ ದಾಖಲೆ ಪರಿಶೀಲಿಸುವ ಸಿಬ್ಬಂದಿ ಸಂಬಂಧಪಟ್ಟ ಖಾತೆಯಲ್ಲಿ ಹಣ ಇದೆಯೋ ಇಲ್ಲವೋ ಎಂಬುದನ್ನು ನೋಡಿಕೊಳ್ಳದೆ ಕರ್ತವ್ಯ ನಿರ್ಲಕ್ಷ ತೋರಿದ್ದಾರೆ. ಇದರಿಂದ ಜೀವನ ನಿರ್ವಹಣೆ ಮಾಡುವುದು ಹಾಗೂ ಕರ್ತವ್ಯ ನಿರ್ವಹಿಸುವುದು ಕಷ್ಟಕರ ಆಗಿದ್ದು, ಮುಂದಿನ ದಿನಗಳಲ್ಲಿ ಇದು ಸರಿಯಾಗದೆ ಇದ್ದಲ್ಲಿ ಕರ್ತವ್ಯದಿಂದ ಮುಕ್ತಿ ಪಡೆಯುವುದಾಗಿ ಅರ್ಚಕ ಕೆ.ಆರ್.ಆನಂದ್ ಬೇಸರ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News