ಶಿವಮೊಗ್ಗ ಡಿಸಿ ಹೆಸರಲ್ಲಿ ಸೈಬರ್ ವಂಚಕರಿಂದ ವಾಟ್ಸ್‌ಆ್ಯಪ್ ಸಂದೇಶ
ಶಿವಮೊಗ್ಗ: ತನ್ನ ಹೆಸರಿನಲ್ಲಿ ಸೈಬರ್ ವಂಚಕರು ವಿದೇಶಿ ನಂಬರ್ ಬಳಸಿ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸುತ್ತಿದ್ದು ಜನರು ಜಾಗರೂಕರಾಗಿರುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ಹೆಸರು ಮತ್ತು ಅವರ ಅಧಿಕೃತ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಂಡಿರುವ ಸೈಬರ್ ವಂಚಕರು, +84 56 455 2858 ಎಂಬ ವಿದೇಶಿ ವಾಟ್ಸ್‌ಆ್ಯಪ್ ಸಂಖ್ಯೆಯ ಮೂಲಕ ಸಾರ್ವಜನಿಕರಿಗೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ನಕಲಿ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಜಿಲ್ಲಾಧಿಕಾರಿಯವರು, ಆ ನಕಲಿ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳುವ ಮೂಲಕ ಅದರ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಿದ್ದಾರೆ.
ಈ ವಿದೇಶಿ ಸಂಖ್ಯೆಯಿಂದ ಬರುತ್ತಿರುವ ಸಂದೇಶಗಳು ಸಂಪೂರ್ಣವಾಗಿ ಸೈಬರ್ ವಂಚಕರ ಕೃತ್ಯವಾಗಿದ್ದು, ಸಾರ್ವಜನಿಕರು ಹಾಗೂ ಸರಕಾರಿ ಸಿಬ್ಬಂದಿ ಇಂತಹ ಸಂದೇಶಗಳಿಗೆ ಯಾವುದೇ ಕಾರಣಕ್ಕೂ ಪ್ರತಿಕ್ರಿಯಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ. ಒಂದು ವೇಳೆ ಇಂತಹ ನಕಲಿ ವಾಟ್ಸ್‌ಆ್ಯಪ್ ಸಂಖ್ಯೆಗಳಿಂದ ಹಣದ ಬೇಡಿಕೆ ಬಂದಲ್ಲಿ ಅಥವಾ ಯಾವುದಾದರೂ ಸಹಾಯ ಕೋರಿ ಸಂದೇಶಗಳು ಸ್ವೀಕೃತವಾದಲ್ಲಿ, ಅವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬೇಕು ಮತ್ತು ಕೂಡಲೇ ಅಂತಹ ಸಂಖ್ಯೆಗಳನ್ನು ಬ್ಲಾಕ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.