ಶಿವಮೊಗ್ಗ | ಡೆತ್ ನೋಟ್ ಬರೆದಿಟ್ಟು ಠಾಣೆಯಲ್ಲೇ ಹೆಡ್ ಕಾನ್‌ಸ್ಟೇಬಲ್ ಆತ್ಮಹತ್ಯೆ
ಮುಹಮ್ಮದ್ ಝಕ್ರಿಯಾ
ಶಿವಮೊಗ್ಗ : ಪಶ್ಚಿಮ ಸಂಚಾರ ಠಾಣೆಯ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಡೆತ್ ನೋಟ್ ಬರೆದಿಟ್ಟು ಠಾಣೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಮೃತರನ್ನು ಹೆಡ್ ಕಾನ್‌ಸ್ಟೇಬಲ್ ಮುಹಮ್ಮದ್ ಝಕ್ರಿಯಾ (55) ಎಂದು ಗುರುತಿಸಲಾಗಿದೆ. ಅವರು ಕಳೆದ ಕೆಲವು ದಿನಗಳಿಂದ ರಜೆ ಮೇಲೆ ಇದ್ದು, ಮೂರು ದಿನಗಳ ಹಿಂದಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಬುಧವಾರ ರಾತ್ರಿ ಶಿವಮೊಗ್ಗ ಬಸ್ ನಿಲ್ದಾಣದ ಬಳಿ ಡ್ಯೂಟಿ ನಿರ್ವಹಿಸಿ ನಂತರ ಠಾಣೆಗೆ ವಾಪಸಾಗಿದ್ದರು ಎಂದು ಮೂಲಗಳು ತಿಳಿಸಿವೆ.
ರಾತ್ರಿ ವೇಳೆ ಪಶ್ಚಿಮ ಸಂಚಾರ ಠಾಣೆಯ ಹಿಂಬದಿ ಸೆಲ್‌ಗಳಿರುವ ಪ್ರದೇಶದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಡೆತ್ ನೋಟ್ ನಲ್ಲಿ ಏನಿದೆ :
“ನನ್ನ ಹಿರಿಯ ಅಧಿಕಾರಿಗಳು ಹಾಗೂ ನನ್ನ ಪ್ರೀತಿಯ ಗೆಳೆಯ ಹಾಗೂ ತಮ್ಮ ಆದಿಲ್ ಹಾಗೂ ನಮ್ಮ ಠಾಣೆಯ ಸಹೋದ್ಯೋಗಿಗಳೆ ನಮಸ್ಕಾರಗಳು ನಾನು ಇಲಾಖೆಯಲ್ಲಿ 26 ವರ್ಷ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದೇನೆ. ಕಳೆದ ಒಂದು ವರ್ಷದಿಂದ ನಮ್ಮ ಠಾಣೆಯ ನಾಸೀರ್ ಅಹಮದ್ (ಹೆಚ್‌ಸಿ 131) ಅವರು ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಜಗಳ ಮಾಡಿ ನನ್ನ ಬಗ್ಗೆ ಸಾರ್ವಜನಿಕವಾಗಿ ಅಪಪ್ರಚಾರ ಮಾಡಿದ್ದಾರೆ. ಉಡುಪಿ ಪಿಎಂ ಬಂದೋಬಸ್ತ್‌ಗೆ ಹೋದ ಸಂದರ್ಭದಲ್ಲೂ ಬೇರೆ ಜಿಲ್ಲೆಗಳ ಸಿಬ್ಬಂದಿಗಳ ಬಳಿ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ಇದರಿಂದ ನನಗೆ ಮಾನಸಿಕವಾಗಿ ತೀವ್ರ ನೋವಾಗಿದೆ ಹಾಗೂ ಆರೋಗ್ಯ ಸಮಸ್ಯೆಯೂ ಉಂಟಾಗಿದೆ” ಎಂದು ಉಲ್ಲೇಖಿಸಿದ್ದಾರೆ.
ನಾನು ನಮ್ಮ ಠಾಣೆಯ ವಿಚಾರವನ್ನು ನಮ್ಮ ಮನೆಯಲ್ಲಿ ಯಾರತ್ರ ಹೇಳಿಕೊಳ್ಳುವುದಿಲ್ಲ, ಆದರೆ ಜಗಳ ಮಾಡಿದ ಬಗ್ಗೆ ಆದಿಲ್ ರವರ ಹತ್ತಿರ ಹೇಳಿಕೊಂಡಿರುತ್ತೇನೆ ಹಾಗೂ ನನ್ನ ಬಗ್ಗೆ,ನನ್ನ ಕರ್ತವ್ಯದ ಬಗ್ಗೆ ರಾಧಾ ಮೇಡಂ ಹಾಗೂ ಕವಿತಾ ಮೇಡಂ ಹತ್ತಿರ ಅವನಿಗೆ ಯಾಕೆ ಅಲ್ಲಿ ಹಾಕಿದಿರಿ ಇಲ್ಲಿ ಹಾಕಿದ್ದೀರಿ ಅಂತ ಕೇಳುತ್ತಾನೆ ಹಾಗೂ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾನೆ. ಆದರಿಂದ ನಾನು ನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ. ನನ್ನ ಸಾವಿಗೆ ನಾಸೀರ್ ಅಹ್ಮದ್ ಹೆಚ್ ಸಿ 131 ಕಾರಣ ಎಂದು ಡೆತ್ ನೋಟ್ ನಲ್ಲಿ ಮುಹಮ್ಮದ್ ಝಕ್ರಿಯಾ ಉಲ್ಲೇಖಿಸಿದ್ದಾರೆ
ಅವರಿಗೆ ಅರೋಗ್ಯ ಸಮಸ್ಯೆಯೂ ಇತ್ತು. ವಾಟ್ಸಪ್ ಗ್ರೂಪ್ ನಲ್ಲಿ ಡೆತ್ ನೋಟ್ ಫಾರ್ವರ್ಡ್ ಮಾಡಿದ್ದಾರೆ. ಅದರಲ್ಲಿ ಠಾಣೆಯ ಸಿಬ್ಬಂದಿ ಕಿರುಕುಳ ನೀಡುತ್ತಿದ್ದರು ಎಂದು ಉಲ್ಲೇಖವಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅವರ ಕುಟುಂಬದವರ ಗಮನಕ್ಕೆ ತಂದಿದ್ದೇವೆ. ಅವರ ಕುಟುಂಬದವರು ದೂರು ಕೊಟ್ಟ ಬಳಿಕ ವಿಚಾರಣೆ ನಡೆಸುತ್ತೇವೆ.
-ನಿಖಿಲ್ ಬಿ., ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.