ಶಿವಮೊಗ್ಗ: ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಶಿವಮೊಗ್ಗ: ಶಿವಮೊಗ್ಗದ ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ದುರಾಡಳಿತ, ಲಂಚಕ್ಕೆ ಬೇಡಿಕೆ, ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆಸುವ ಆರೋಪಗಳ ಹಿನ್ನೆಲೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಸೂಚನೆ ಮೇರೆಗೆ ಲೋಕಾಯುಕ್ತ ಪೊಲೀಸರು, ಪರಿಶೀಲನೆ ನಡೆಸಿದರು.
ದಾವಣಗೆರೆ, ಚಿತ್ರದುರ್ಗದಿಂದ ಬಂದಿದ್ದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ನಾಲ್ಕು ತಂಡ ಹಾಗೂ ಶಿವಮೊಗ್ಗ ಲೋಕಾಯುಕ್ತ ಕಚೇರಿಯ ಅಧಿಕಾರಿಗಳನ್ನೊಳಗೊಂಡ ನಾಲ್ಕು ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಸಿಂಧುತ್ವ ಪ್ರಮಾಣ ಪತ್ರ, ಮೈನಾರಿಟಿ, ಸಾಲ್ವೆನ್ಸಿ ಸರ್ಟಿಫಿಕೇಟ್, ಜಾತಿ ಪ್ರಮಾಣಪತ್ರ ಪಡೆಯಲು ಸಲ್ಲಿಕೆಯಾದ ಅರ್ಜಿಗಳು ಅದರಲ್ಲಿ ನಿಗದಿತ ಕಾಲಮಿತಿಯಲ್ಲಿ ಎಷ್ಟು ವಿಲೇವಾರಿ ಆಗಿವೆ. ಎಷ್ಟು ಬಾಕಿ ಉಳಿದಿವೆ ಎಂಬುದನ್ನು ಪರಿಶೀಲಿಸಿದರು.
ಪರಿಹಾರವಾಗದೇ ಇರುವ ಸಾರ್ವಜನಿಕರ ಅಹವಾಲು, ಕಚೇರಿಯಲ್ಲಿ ಸಿಬ್ಬಂದಿ ಹಾಜರಾತಿ ವಿವರ, ಬಾಕಿ ಇರುವ ಕಡತಗಳು, ಸುದೀರ್ಘ ಕಾಲದಿಂದ ಬಾಕಿ ಉಳಿಸಿಕೊಂಡಿರುವುದಕ್ಕೆ ಕಾರಣ, ಹಕ್ಕು ಬದಲಾವಣೆ, ಭೂ ಮಂಜೂರಾತಿ, ಭೂಮಿ, ಬಗರ್‌ಹುಕುಂ, ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಂಬಂಧಿಸಿದಂತೆ ವಿಲೇವಾರಿಯಾಗದೇ ಉಳಿದಿರುವ ಅರ್ಜಿಗಳ ಬಗ್ಗೆಯೂ ಮಾಹಿತಿ ಪಡೆದರು.
ಈ ಬಾರಿ ಅತಿವೃಷ್ಟಿ ವೇಳೆ ಮನೆ, ಜಾನುವಾರುಗಳಿಗೆ ಆಗಿರುವ ಹಾನಿ, ಪರಿಹಾರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆಯೂ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮಾಹಿತಿ ಪಡೆದರು. ಲೋಕಾಯುಕ್ತ ಎಸ್ಪಿ ಮಂಜುನಾಥ ಚೌಧರಿ, ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ನೇತೃತ್ವದಲ್ಲಿ ಈ ತಂಡಗಳ ಮೇಲ್ವಿಚಾರಣೆ ನಡೆಸಲಾಯಿತು.