×
Ad

ಸೊರಬ | ಮಗಳ ಕೊಲೆಗೆ ಯತ್ನಿಸಿದ ತಂದೆ: ಆರೋಪಿ ಪೊಲೀಸ್ ವಶಕ್ಕೆ

Update: 2025-06-29 11:39 IST

ಸೊರಬ: ಮದುವೆಗೆ ಮುನ್ನವೇ ಗರ್ಭವತಿಯಾಗಿದ್ದ 21 ವರ್ಷದ ಪುತ್ರಿಯನ್ನು ಮರ್ಯಾದೆಗೆ ಅಂಜಿ ತಂದೆಯೇ ಕೊಲೆ ಮಾಡಲು ಯತ್ನಿಸಿದ ಘಟನೆ ತಾಲೂಕಿನ ಉಳವಿ ಸಮೀಪದ ಕಾನಹಳ್ಳಿ ಎಂಬಲ್ಲಿ ಶನಿವಾರ ನಡೆದಿರುವುದು ವರದಿಯಾಗಿದೆ.

ಪುತ್ರಿ ಗರ್ಭಿಣಿ ಆಗಿರುವ ವಿಚಾರ ತಿಳಿದು ಸಿಟ್ಟಾದ ಆರೋಪಿ ತಂದೆ ಆಸ್ಪತ್ರೆಗೆ ಹೋಗೋಣವೆಂದು ಹೇಳಿ ಪತ್ನಿ ಹಾಗೂ ಮಗಳನ್ನು ಕಾನಹಳ್ಳಿ ಬಳಿಯ ಕಣ್ಣೂರು ಅರಣ್ಯ ಪ್ರದೇಶಕ್ಕೆ ಶನಿವಾರ ಕರೆದೊಯ್ದಿದ್ದಾನೆ. ಅಲ್ಲಿ ಮಗಳ ಕುತ್ತಿಗೆಗೆ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಹತ್ಯೆಗೆ ಯತ್ನಿಸಿದ್ದಾನೆ. ಪುತ್ರಿಯನ್ನು ಸಾಯಿಸಬೇಡಿ ಎಂದು ಪತ್ನಿ ಗೋಗೆರದರೂ ಬಿಡಲಿಲ್ಲ. ಈ ವೇಳೆ ಯುವತಿಗೆ ಪ್ರಜ್ಞೆ ತಪ್ಪಿದ್ದಾಳೆ. ಆಕೆ ಮೃತಪಟ್ಟಿರಬಹುದು ಎಂದು ಭಾವಿಸಿ ತಂದೆತಾಯಿ ಅಲ್ಲಿಂದ ತೆರಳಿದ್ದಾರೆನ್ನಲಾಗಿದೆ.

ಕೆಲವು ಹೊತ್ತಿನ ನಂತರ ಯುವತಿಗೆ ಪ್ರಜ್ಞೆ ಬಂದಿದ್ದು, ರಸ್ತೆಯವರೆಗೂ ನಡೆದು ಬಂದಿದ್ದಾಳೆ. ಸ್ಥಳೀಯರ ಸಹಾಯದಿಂದ ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾಳೆ. ಅಲ್ಲಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಯುವತಿ ನೀಡಿರುವ ದೂರಿನಂತೆ ಪಟ್ಟಣ ಠಾಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News