ಕೋಮುಭಾವನೆ ಕೆರಳಿಸುವ ಹೇಳಿಕೆ | ಕೆ.ಎಸ್.ಈಶ್ವರಪ್ಪ ವಿರುದ್ಧ ಸುಮೊಟೊ ಕೇಸ್ ದಾಖಲು
ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ: ಕೋಮುಭಾವನೆ ಕೆರಳಿಸುವ ಹೇಳಿಕೆ ನೀಡಿದ ಆರೋಪದಲ್ಲಿ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ವಿರುದ್ಧ ಶಿವಮೊಗ್ಗದಲ್ಲಿ ಮತ್ತೊಂದು ಸುಮೊಟೊ ಕೇಸ್ ದಾಖಲಾಗಿದೆ.
ಪ್ರಚೋದನಾಕಾರಿ ಭಾಷಣ ಹಾಗೂ ಕೋಮು ಭಾವನೆ ಕೆರಳಿಸಲು ಪ್ರೇರಣೆ ನೀಡಿದ್ದಾರೆ ಎಂಬ ಆರೋಪದಲ್ಲಿ ಶಿವಮೊಗ್ಗದ ಕೋಟೆ ಠಾಣೆ ಪೊಲೀಸರು ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದಾರೆ.
ಕೋಟೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಹರೀಶ್ ಕೆ.ಪಟೇಲ್ ನೀಡಿದ ದೂರಿನ ಮೇರೆಗೆ ಈಶ್ವರಪ್ಪ ವಿರುದ್ಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಂಗ್ಲಾದೇಶದಲ್ಲಿ ಹಿಂದೂ ಸಂತರ ಬಂಧನ ಹಾಗೂ ಹಿಂದೂಗಳ ಮೇಲಿನ ಹಲ್ಲೆ ಖಂಡಿಸಿ, ಹಿಂದೂ ರಕ್ಷಣಾ ಸಮಿತಿ, ವಿಶ್ವ ಹಿಂದೂ ಪರಿಷತ್‌ನಿಂದ ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಡಿಸೆಂಬರ್ 3ರಂದು ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿದ್ದ ಈಶ್ವರಪ್ಪ, ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ. ಅಲ್ಲದೆ, ಕೋಮು ಪ್ರಚೋದನೆ ಜೊತೆಗೆ ಮುಸಲ್ಮಾನರ ವಿರುದ್ಧ ದ್ವೇಷ ಭಾವನೆ ಹಾಗೂ ಸೌಹಾರ್ದ ಕೆಡವಲು ಯತ್ನಿಸಿದ್ದಾರೆ ಎಂಬ ಆರೋಪದಲ್ಲಿ ಪೊಲೀಸರು ಸುಮೋಟೊ ಕೇಸ್ ದಾಖಲಿಸಿಕೊಂಡಿದ್ದಾರೆ.
20 ದಿನಗಳ ಹಿಂದೆಯಷ್ಟೇ ವಕ್ಫ್ ವಿಚಾರದಲ್ಲಿ ನೀಡಿದ ಈಶ್ವರಪ್ಪ ಹೇಳಿಕೆ ಬಗ್ಗೆ ಜಯನಗರ ಇನ್‌ಸ್ಪೆಕ್ಟರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಜಯನಗರ ಠಾಣೆಯಲ್ಲಿ ಸುಮೋಟೊ ಕೇಸ್ ದಾಖಲಾಗಿತ್ತು.