ಗ್ರ್ಯಾಂಡ್ ಚೆಸ್ ಟೂರ್ | ಮ್ಯಾಗ್ನಸ್ ಕಾರ್ಲ್‌ಸನ್‌ಗೆ ಆಘಾತ: ಡಿ.ಗುಕೇಶ್‌ಗೆ ಮುನ್ನಡೆ
PC: x.com/airnewsalerts
ವಿಶ್ವ ಚಾಂಪಿಯನ್ ಡಿ.ಗುಕೇಶ್ ಗ್ರ್ಯಾಂಡ್ ಚೆಸ್ ಟೂರ್ನಿಯ ಆರನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಜಯ ಸಾಧಿಸಿ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದರು.
ಝಗ್ರೆಬ್ ನಲ್ಲಿ ಪರಸ್ಪರ ಮುಖಾಮುಖಿಯಾದ ಉಭಯ ಆಟಗಾರರ ಪೈಕಿ ಗುಕೇಶ್ ಇದೀಗ 10 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
2025ರ ನಾರ್ವೆ ಚೆಸ್ ನಲ್ಲಿ ಸಂಭವಿಸಿದ ಘಟನಾವಳಿಗಳನ್ನು ನೆನಪಿಸುವಂತೆ ಇಲ್ಲೂ ಕಾರ್ಲ್‌ಸನ್ ಆರಂಭಿಕ ಲಾಭ ಪಡೆದರು. ಕಾರ್ಲ್‌ಸನ್ ಇಂಗ್ಲಿಷ್ ಓಪನಿಂಗ್ ಮೂಲಕ ಮಿಂಚಿನ ಆರಂಭದಲ್ಲಿ ಗುಕೇಶ್ ಅವರನ್ನು ಹಿಡಿಯುವ ಬಲೆ ಹೆಣೆದರು. ಆದರೆ ಕಾರ್ಲ್‌ಸನ್ 23ನೇ ನಡೆಯಲ್ಲಿ ಎಸಗಿದ ಪ್ರಮಾದದಿಂದ ಪಂದ್ಯ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಗೆ ಅನುಕೂಲವಾಯಿತು.
ಇದಕ್ಕೂ ಮುನ್ನ 4 ಮತ್ತು 5ನೇ ಸುತ್ತಿನಲ್ಲಿ ಗುಕೇಶ್, ಉಜ್ಬೆಕಿಸ್ತಾನದ ನೊದಿರ್‌ಬೆಕ್ ಅಬ್ದುಸತ್ತರೋವ್ ಮತ್ತು ಅಮೆರಿಕದ ಫ್ಯಾಬಿನೊ ಕರುಣಾ ವಿರುದ್ಧ ಜಯ ಸಾಧಿಸಿದ್ದರು.
ಪಂದ್ಯದ ಬಳಿಕ ಮಾತನಾಡಿದ ಗುಕೇಶ್, "ಹೌದು; ಮ್ಯಾಗ್ನಸ್ ವಿರುದ್ಧ ಗೆಲುವು ಸಾಧಿಸುವುದು ಖಂಡಿತವಾಗಿಯೂ ವಿಶೇಷ. ಇದು ಬಹುಶಃ ಕಳಪೆ ಆರಂಭ ಪಡೆದ ಇಂಥ ಸಂದರ್ಭದಲ್ಲಿ ಹೆಚ್ಚಿನ ಆತ್ಮವಿಶ್ವಾಸ ನೀಡುತ್ತದೆ. ಸತತ ಎರಡು ಪಂದ್ಯಗಳನ್ನು ಸೋತ ಬಳಿಕ ಮ್ಯಾಗ್ನಸ್ ವಿರುದ್ಧ ಜಯ ಸಾಧಿಸುವುದು ಸಾಧ್ಯವಾಯಿತು" ಎಂದು ನುಡಿದರು.
ಪಂದ್ಯದ ವೀಕ್ಷಕ ವಿವರಣೆಕಾರರ ಜತೆಗಿದ್ದ ಚೆಸ್ ದಂತಕಥೆ ಗ್ಯಾರಿ ಕ್ಯಾಸ್ಪರೋವ್, "ಇದೀಗ ಮ್ಯಾಗ್ನಸ್ ಅವರ ಪ್ರಾಬಲ್ಯವನ್ನು ನಿಜಕ್ಕೂ ಪ್ರಶ್ನಿಸಬಹುದು. ಇದು ಗುಕೇಶ್ ವಿರುದ್ಧ ಅವರಿಗೆ ಎರಡನೇ ಸೋಲು ಮಾತ್ರವಲ್ಲದೇ ಇದು ಮನವರಿಕೆ ಮಾಡಿಕೊಡುವಂಥ ಸೋಲು. ಇದು ಪವಾಡವಲ್ಲ ಅಥವಾ ಗುಕೇಶ್, ಮ್ಯಾಗ್ನಸ್ ಅವರ ತಪ್ಪುಗಳ ಲಾಭ ಪಡೆಯುತ್ತಿರುವುದಲ್ಲ. ಇದು ದೊಡ್ಡ ಹೋರಾಟ; ಮ್ಯಾಗ್ನಸ್ ಸೋತರು" ಎಂದು ಬಣ್ಣಿಸಿದರು.