ಕೇರಳ | ಒಂದು ಚಾಕೊಲೇಟ್‌ಗಾಗಿ ಮೂವರು ಬಾಲಕರು ಮಾಡಿದ್ದೇನು?
ಜನ ಮೆಚ್ಚಿದ ಸರಕಾರಿ ಶಾಲೆಯ ಹುಡುಗರ ಪ್ರಾಮಾಣಿಕತೆ
ಪ್ರಾಮಾಣಿಕತೆ ಅಪರೂಪವಾಗುತ್ತಿರುವಾಗ, ಕೇರಳದ ಮೂವರು ವಿದ್ಯಾರ್ಥಿಗಳು ಮಾಡಿದ ಕೆಲಸ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.
ಚಾಕೊಲೇಟ್‌ಗಾಗಿ, ಸಿಬ್ಬಂದಿ ಇಲ್ಲದ ಮೆಡಿಕಲ್ ಶಾಪ್‌ನಲ್ಲಿ ಈ ಹುಡುಗರು ಮಾಡಿದ ಕೆಲಸ ಇದೀಗ ವೈರಲ್ ಆಗಿದೆ.
ಈ ಘಟನೆ ನಡೆದಿರುವುದು ಕೇರಳದ ಪಾಲಕ್ಕಾಡ್ ಜಿಲ್ಲೆಯ ಪಟ್ಟಾಂಬಿಯಲ್ಲಿ.
ಸಿನಾನ್, ಮುಸ್ತಫಾ ಮತ್ತು ಅನ್ಶಿದ್ – ಪಟ್ಟಾಂಬಿ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು. ಒಂದು ದಿನ ಶಾಲೆ ಬಿಟ್ಟ ಬಳಿಕ ಈ ಮೂವರು ಚಾಕೊಲೇಟ್ ಖರೀದಿಸಲು ಮೆಡಿಕಲ್ ಸ್ಟೋರ್‌ಗೆ ಬಂದಿದ್ದರು. ಆದರೆ, ಕೌಂಟರ್‌ನಲ್ಲಿ ಸಿಬ್ಬಂದಿ ಇರಲಿಲ್ಲ. ಮನೆಯ ಕಡೆಗೆ ಹೋಗುವ ಅವಸರವಿದ್ದ ಕಾರಣ, ಅಲ್ಲಿ ಕಾಯುವ ತಾಳ್ಮೆಯೂ ಅವರಿಗೆ ಇರರಲಿಲ್ಲ. ಚಾಕಲೇಟ್ ಖರೀದಿಸದೇ ಹೋಗಲೂ ಮನಸ್ಸು ಕೇಳಲಿಲ್ಲ.
ಆಗ ಈ ಬಾಲಕರಿಗೆ ಒಂದು ಐಡಿಯಾ ಹೊಳೆದಿದೆ. ಮೆಡಿಕಲ್‌ನವರು ಮುಂದಿಟ್ಟಿದ್ದ ಡಬ್ಬದಿಂದ ತಮಗೆ ಬೇಕಾಗಿದ್ದ ಒಂದು 'ಹಾಜ್‌ಮೋಲಾ' ಚಾಕೊಲೇಟ್ ಅನ್ನು ತೆಗೆದುಕೊಂಡರು. ಆದರೆ, ಕೇವಲ ತೆಗೆದುಕೊಂಡು ಹೋಗಲಿಲ್ಲ. ತಾವು ಚಾಕೊಲೇಟ್ ತೆಗೆಯುತ್ತಿರುವುದನ್ನು ಖಾತರಿಪಡಿಸಲು, ಅದನ್ನು ಸಿಸಿಟಿವಿ ಕ್ಯಾಮರಾ ಎದುರೇ ಪ್ರದರ್ಶಿಸಿದರು.
ಅಷ್ಟಕ್ಕೇ ಮುಗಿಯಲಿಲ್ಲ. ಆ ನಂತರ ಒಂದು ಚೀಟಿ ಬರೆದರು. ಆ ಚೀಟಿಯಲ್ಲಿ, "ನಾವು ಒಂದು ಹಾಜ್‌ಮೋಲಾ ತೆಗೆಯುತ್ತಿದ್ದೇವೆ. ಸಿಸಿಟಿವಿ ಪರಿಶೀಲಿಸಿ" ಎಂದು ಬರೆದು, ಅದರ ಕೆಳಗೆ ತಮ್ಮ ಸಹಿ ಹಾಕಿದ್ದರು. ಮತ್ತು ಆ ಚಾಕೊಲೇಟ್‌ನ ಹಣವನ್ನು ಕೂಡ ಆ ಚೀಟಿಯೊಂದಿಗೆ ಇಟ್ಟು ಹೋಗಿದ್ದರು.
ಮೆಡಿಕಲ್ ಮಾಲಕ ವಾಪಸ್ ಬಂದು ನೋಡಿದಾಗ, ಕೌಂಟರ್‌ನಲ್ಲಿ ಚೀಟಿ ಮತ್ತು ಒಂದು ರೂಪಾಯಿ ನಾಣ್ಯ ಸಿಕ್ಕಿತು. ಅವರು ಕುತೂಹಲದಿಂದ ಸಿಸಿಟಿವಿ ಪರಿಶೀಲಿಸಿದಾಗ, ಈ ಮೂವರು ಬಾಲಕರ ಪ್ರಾಮಾಣಿಕತೆ ಬಯಲಾಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಜನರು ಈ ಪುಟ್ಟ ಹುಡುಗರನ್ನು ಕೊಂಡಾಡುತ್ತಿದ್ದಾರೆ.