×
Ad

ಆಮಿರ್ ಗೆ ತೆರೆದ ಹಜ್ ನ ಬಾಗಿಲು!

Update: 2025-06-02 21:33 IST

ಪ್ರತಿಯೊಬ್ಬ ಹಜ್ ಯಾತ್ರಿಕನೂ "ಅಲ್ಲಾಹನೇ , ನಿನ್ನ ಕರೆಯ ಮೇರೆಗೆ ನಾನು ಇಲ್ಲಿಗೆ ಬಂದಿದ್ದೇನೆ" ಎಂದು ಹೇಳುತ್ತಾ ಜಗತ್ತಿನ ಮೂಲೆ ಮೂಲೆಗಳಿಂದಲೂ ಮಕ್ಕಾಗೆ ಹೊರಡುತ್ತಾರೆ. ಲಬ್ಬಯಿಕಲ್ಲಾಹುಮ್ಮ ಲಬ್ಬಯ್ಕ್ ಎನ್ನುತ್ತಲೇ ಮಕ್ಕಾದ ಕಡೆಗೆ ಸಾಗುತ್ತಾರೆ. ಹೀಗೆ ಮಕ್ಕಾಗೆ ಹೊರಟ ಒಬ್ಬನ ಕರೆ ಹೇಗೆ ಆತನನ್ನು ಮಕ್ಕಾಗೆ ತಲುಪಿಸಿತು ಎಂಬ ನಿಜ ಕತೆ ಇದು.

ಅರಬ್ ರಾಷ್ಟ್ರಗಳ ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಲಿಬಿಯಾದ ಆಮಿರ್ ಗಡಾಫಿಯ ಕಥೆ ವೈರಲ್ ಆಗುತ್ತಿದೆ. ಹಜ್‌ಗೆ ಹೊರಟ ಆಮಿರ್ ಗೆ ಎದುರಾದ ಸಂಕಷ್ಟಗಳು ಮತ್ತು ಸವಾಲುಗಳು ಹಲವು.

ಲಿಬಿಯಾದಿಂದ ಹಜ್ ಯಾತ್ರಿಕರ ಒಂದು ತಂಡ ಈ ಬಾರಿ ಹಜ್‌ಗೆ ಹೊರಟಿತು. ವಿಮಾನ ನಿಲ್ದಾಣವನ್ನು ತಲುಪಿದ ತಂಡ ಎಮಿಗ್ರೇಶನ್ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿತು.ಆದರೆ ದುರದೃಷ್ಟವಶಾತ್ ಒಬ್ಬ ವ್ಯಕ್ತಿಯ ಎಮಿಗ್ರೇಶನ್ ವಿಧಾನಗಳು ಮಾತ್ರ ಅವರ ಹೆಸರಿಗೆ ಸಂಬಂಧಪಟ್ಟ ತಾಂತ್ರಿಕ ಕಾರಣಗಳಿಂದ ವಿಳಂಬವಾಯಿತು.

"ನಿಮಗೆ ತಕ್ಷಣ ಹೊರಡಬಹುದು, ತಡವಾಗುವುದಿಲ್ಲ" ಎಂದು ಎಮಿಗ್ರೇಶನ್ ಸಿಬ್ಬಂದಿ ಅವರಿಗೆ ಭರವಸೆ ಕೊಟ್ಟರು. ಆದರೆ ಪರಿಸ್ಥಿತಿ ತಲೆಕೆಳಗಾಯಿತು. ವಿಮಾನ ಹೊರಡುವ ಸಮಯವಾದರೂ, ಲಿಬಿಯಾದ ವ್ಯಕ್ತಿ ಆಮಿರ್ ಅವರ ಎಮಿಗ್ರೇಶನ್ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ. ಅಷ್ಟೊತ್ತಿಗೆ ವಿಮಾನದ ಬಾಗಿಲು ಮುಚ್ಚಲಾಗಿತ್ತು. ವಿಮಾನ ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಆಮಿರ್ ಎಮಿಗ್ರೇಶನ್ ಪೂರ್ಣಗೊಳಿಸಿ ವಿಮಾನಕ್ಕೆ ಹೋಗುವ ಗೇಟ್ ಬಳಿ ಓಡೋಡಿ ಬಂದರು. ಆದರೆ ವಿಮಾನ ಪ್ರವೇಶಕ್ಕೆ ಪೈಲಟ್ ನಿರಾಕರಿಸಿದರು. ವಿಮಾನದ ಬಾಗಿಲು ತೆರೆಯಲಿಲ್ಲ.

ಕೊನೆಗೆ ಆಮಿರ್ ಅವರನ್ನು ಅಲ್ಲೇ ಬಿಟ್ಟು ವಿಮಾನ ಜಿದ್ದಾಗೆ ಹೊರಟಿತು!

'ಅಲ್ಲಾಹನು ನಿಮಗೆ ಹಜ್ ನಿರ್ವಹಿಸಲು ಅವಕಾಶ ನೀಡುತ್ತಾನೆ. ನಿರಾಶೆಗೊಳ್ಳಬೇಡಿ, ಈ ಬಾರಿ ಅದು ನಿಮ್ಮ ವಿಧಿಯಲ್ಲಿಲ್ಲ ' ಎಂದು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಆಮಿರ್ ಗೆ ಹೇಳಿ ಸಮಾಧಾನ ಪಡಿಸಿದರು. ಆದರೆ ಆಮಿರ್ ಅವರ ಉತ್ತರ ದೃಢವಾಗಿತ್ತು: 'ನಾನು ಹಜ್ ಮಾಡಲು ನಿರ್ಧರಿಸಿದ್ದೇನೆ. ಅಲ್ಲಾಹನು ನಿರ್ಧರಿಸಿದರೆ, ನಾನು ಖಂಡಿತ ಈ ಬಾರಿಯೇ ಹೋಗುತ್ತೇನೆ.'

ನಂತರದ ಘಟನೆಗಳು ಎಲ್ಲರನ್ನೂ ಬೆಚ್ಚಿಬೀಳಿಸಿದವು.

ಆಮಿರ್ ಇಲ್ಲದೆ ಜಿದ್ದಾಗೆ ಹೊರಟ ವಿಮಾನವು ತಾಂತ್ರಿಕ ಸಮಸ್ಯೆಗಳಿಂದಾಗಿ ಅನಿರೀಕ್ಷಿತವಾಗಿ ಮತ್ತದೇ ನಿಲ್ದಾಣಕ್ಕೆ ಹಿಂತಿರುಗಬೇಕಾಯಿತು. ಅಲ್ಲಿ ವಿಮಾನದ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲಾಯಿತು ಮತ್ತು ವಿಮಾನವು ಮತ್ತೆ ಹಾರಲು ಸಿದ್ಧವಾಗಿ ನಿಂತಾಗ ಆಮಿರ್ ಅವರನ್ನು ಹತ್ತಿಸಲು ಪೈಲಟ್ ಮತ್ತು ಇತರರು ಸಿದ್ಧರಿರಲಿಲ್ಲ.

'ಈ ಬಾರಿ ಹಜ್ ನಿಮ್ಮ ವಿಧಿಯಲ್ಲಿಲ್ಲ , ಆಮಿರ್ ಕ್ಷಮಿಸಿ' ಎಂದು ಭದ್ರತಾ ಅಧಿಕಾರಿ ಪುನರಾವರ್ತಿಸಿದರು. ಆದರೆ ಆಮಿರ್ ಹೊರಗೆ ಹೋಗದೆ ವಿಮಾನ ನಿಲ್ದಾಣದಲ್ಲೇ ಕಾಯುತ್ತಿದ್ದರು. ಜಿದ್ದಾಗೆ ಹೊರಟ ವಿಮಾನದಲ್ಲಿ ಮತ್ತೆ ತಾಂತ್ರಿಕ ಸಮಸ್ಯೆ ಇದೆ. ಅದು ಮತ್ತೆ ನಿಲ್ದಾಣಕ್ಕೆ ಹಿಂತಿರುಗಲಿದೆ ಎಂದು ನಿಲ್ದಾಣದಲ್ಲಿ ಅನೌನ್ಸ್ ಆಯಿತು.

ಮತ್ತೆ ಅದೇ ವಿಮಾನ ಅದೇ ನಿಲ್ದಾಣಕ್ಕೆ ಹಿಂತಿರುಗಿ ಬಂತು. ಆಮಿರ್ ಜೊತೆಗೆ ಹೋಗಬೇಕಿದ್ದ ಹಜ್ ಯಾತ್ರಿಕರು ವಿಮಾನದಲ್ಲೇ ಕುಳಿತಿದ್ದರು. ಸಮಸ್ಯೆಯನ್ನು ಸರಿಪಡಿಸಲಾಯಿತು. ವಿಮಾನ ಮತ್ತೆ ಹೊರಡಲು ಸಿದ್ದವಾಯಿತು. ಆದರೆ ಈ ಬಾರಿ ಹೊರಡಲು ಪೈಲಟ್ ಯಾಕೋ ಮನಸ್ಸು ಮಾಡುತ್ತಿಲ್ಲ. ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು.

ಆಮಿರ್ ಇಲ್ಲದೆ ತಾನು ಹೋಗುವುದಿಲ್ಲ ಎಂದು ಪೈಲಟ್ ಹೇಳಿದರು. ಕೊನೆಗೆ, ಆಮಿರ್ ಅವರ ಮುಂದೆ ಹಜ್‌ನ ಬಾಗಿಲು ತೆರೆದಂತೆ ವಿಮಾನದ ಬಾಗಿಲು ತೆರೆಯಲಾಯಿತು. ಅವರು ಜಿದ್ದಾ ತಲುಪಿದಾಗ, ವಿಮಾನದ ಪೈಲಟ್‌ಗಳು ಮತ್ತು ಅಧಿಕಾರಿಗಳು ಅವರೊಂದಿಗೆ ಒಂದು ಗ್ರೂಪ್ ಫೋಟೋ ತೆಗೆದ ನಂತರ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.

ಲಬ್ಬಯಿಕಲ್ಲಾಹುಮ್ಮ ಲಬ್ಬಯ್ಕ್ ಎನ್ನುತ್ತಾ ಕೋಟ್ಯಂತರ ಶ್ರದ್ಧಾಳುಗಳ ಜೊತೆ ಈ ಬಾರಿ ಆಮಿರ್ ಕೂಡಾ ಹಜ್ ನಿರ್ವಹಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!