×
Ad

ಬೆಳಗಾವಿಯಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣದ ಹಿನ್ನೆಲೆ ಏನು?

Update: 2025-06-30 22:22 IST

ಗುಂಪೊಂದು, ಐವರು ಶ್ರೀರಾಮಸೇನೆಯ ಕಾರ್ಯಕರ್ತರಿಗೆ ಹಲ್ಲೆ ನಡೆಸಿದೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಳೆದೆರೆಡು ದಿನಗಳಿಂದ ವೈರಲ್‌ ಆಗಿತ್ತು. ಇಂಗಳಿ ಬಳಿಯ ಗೋಶಾಲೆಯಲ್ಲಿದ್ದ ಗೋವುಗಳನ್ನು ಕೆಲವರು ಬೇರೆಡೆಗೆ ರವಾನಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಪ್ರಶ್ನಿಸಿದ್ದಕ್ಕೆ ಈ ಹಲ್ಲೆ ನಡೆದಿದೆ ಎಂದು ವರದಿಯಾಗಿತ್ತು. ದುಷ್ಕರ್ಮಿಗಳು ಶ್ರೀರಾಮಸೇನೆ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಎಸ್‌ಪಿ ಭೀಮಾಶಂಕರ್ ಗುಳೇದ್ ಅವರು ಪತ್ರಕರ್ತರ ಜೊತೆ ಮಾತನಾಡಿ, "ಜೂನ್ 26ನೇ ತಾರೀಕು ಕುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಬು ಸಾಬ್ ಮುಲ್ತಾನಿ ಐದು ಗೋವುಗಳನ್ನು ಸಾಗಿಸುವಾಗ ಅವರ ವಾಹನವನ್ನು ಶ್ರೀರಾಮಸೇನೆಯ ಕಾರ್ಯಕರ್ತರು ಹಿಂಬಾಲಿಸಿದ್ದರು. ವಿಷಯ ಪೊಲೀಸರಿಗೆ ತಿಳಿಯುತ್ತೆ. ಪೊಲೀಸ್ ಠಾಣೆಗೆ ಬಂದಾಗ ಪೊಲೀಸ್ ಠಾಣೆಯಲ್ಲಿ ಅವರ ನಡುವೆ ಮಾತುಕತೆ ಆಗುತ್ತದೆ. ಪೊಲೀಸರು ಬಾಬು ಸಾಬ್ ಮುಲ್ತಾನಿಯಲ್ಲಿ ಈ ಬಗ್ಗೆ ವಿಚಾರಿಸುತ್ತಾರೆ. ಆಗ "ನಾನು ಜಾತ್ರೆಯಿಂದ ತೆಗೆದುಕೊಂಡು ಬಂದಿದ್ದೀನಿ. ನಾನು ಡೈರಿ ಫಾರ್ಮಿಂಗ್ ಮಾಡ್ತೀನಿ" ಅಂತ ಅವರು ಹೇಳಿದ್ದರು. ಅಲ್ಲದೆ, ಜಾತ್ರೆಯಿಂದ ಖರೀದಿ ಮಾಡಿಕೊಂಡು ಬಂದಿರುವುದಕ್ಕೆ ದಾಖಲೆಗಳನ್ನ ಒದಗಿಸಿದ್ದರು. ಅದನ್ನು ನೋಡಿ "ಆಯ್ತು ಸರ್ ನಮ್ದೇನು ಕಂಪ್ಲೇಂಟ್ ಇಲ್ಲ" ಎಂದು ಹೇಳಿ ಶ್ರೀರಾಮಸೇನೆಯ ಕಾರ್ಯಕರ್ತರು ಬರೆದು ಕೊಟ್ಟಿರುವ ದಾಖಲೆ ಕೂಡ ನಮ್ಮಲ್ಲಿ ಇದೆ. ಅಲ್ಲಿಂದ ಪೊಲೀಸರು ಗೋ ಶಾಲೆಗೆ ಸಾಗಿಸಿದ್ದ ಗೋವುಗಳನ್ನು ಎರಡು ದಿನ ಬಿಟ್ಟು ಮನೆಗೆ ತೆಗೆದು ಕೊಂಡು ಹೋಗುವ ವೇಳೆ ಶ್ರೀರಾಮ ಸೇನೆಯವರು ಆ ಮನೆಗೆ ನುಗ್ಗಿದ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ಶ್ರೀರಾಮಸೇನೆ ಕಾರ್ಯಕರ್ತರೇ ಮೊದಲು ಮನೆಗೆ ನುಗ್ಗಿದ್ದು, ಬಳಿಕ ಅವರ ಮೇಲಿನ ಹಲ್ಲೆ ನಡೆದಿದ್ದು ದುರದೃಷ್ಟಕರ. ಹಲ್ಲೆ ಕುರಿತು ನಾವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ. ಜೂನ್ 28ರಂದು ಗೋ ಶಾಲೆಯಲ್ಲಿ ದನದ ಮಾಲೀಕ ಗೋವು ಬಿಡಿಸಿಕೊಳ್ಳಲು ಹೋಗಿದ್ದಾರೆ. ಅವರನ್ನು ಹಿಂಬಾಲಿಸಿದ ಶ್ರೀರಾಮಸೇನೆ ಕಾರ್ಯಕರ್ತರು ವಾಹನದ ಮಾಲೀಕ ಬಾಬು ಸಾಬ್ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿ ಹೆಣ್ಣು ಮಕ್ಕಳಿದ್ದರು. ಈ ವೇಳೆ ಮಹಿಳೆಯರು ಕಿರುಚಿಕೊಂಡಾಗ ಪಕ್ಕದ ಜನರು ಬಂದರು. ಆ ಬಳಿಕ ಎಲ್ಲರನ್ನೂ ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರ ಬಳಿ ಆ ದಿನವೇ ಇಬ್ಬರು ಯಾವುದೇ ತಂಟೆ ತಕರಾರು ಇಲ್ಲ ಅಂತ ಬರೆದುಕೊಟ್ಟಿದ್ದಾರೆ ಎಂದು ತಿಳಿಸಿದರು.

ಇದರ ಹೊರತಾಗಿಯೂ ಗುಂಪು ಹಲ್ಲೆಯ ವಿಡಿಯೋ ಕಾಣಿಸಿಕೊಂಡ ನಂತರ ಪೊಲೀಸರು ಶ್ರೀರಾಮಸೇನೆ ಕಾರ್ಯಕರ್ತರಿಗೆ ಲಿಖಿತ ದೂರು ನೀಡುವಂತೆ ಹೇಳಿದ್ದೇವೆ. ಆದರೆ ಅವರು ಯಾವುದೇ ದೂರು ಬಂದಿಲ್ಲ. ಈಗ ಯಾವುದೇ ದೂರು ನೀಡದ ಕಾರಣ, ವೈರಲ್ ಆಗಿರುವ ವಿಡಿಯೋ ಆಧರಿಸಿ ನಾವು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಎಂದು ಎಸ್ಪಿ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಎರಡು ಪ್ರತ್ಯೇಕ ಕೇಸ್ ದಾಖಲಾಗಿದ್ದು, ಶ್ರೀರಾಮಸೇನೆ ಕಾರ್ಯಕರ್ತ ಮಹಾವೀರ್ ಸೊಲ್ಲಾಪುರ ಸೇರಿ ಇನ್ನುಳಿದವರ ಮೇಲೆ ಬಿಎನ್ಎಸ್ ಖಾಯ್ದೆ 189(2)192(2)115(2)352(2)126(2)190) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶಿವಪುತ್ರ ಸನದಿ ಎಂಬ ಡ್ರೈವರ್‌ ನೀಡಿದ ದೂರಿನ ಮೇರೆಗೆ ಈ ಕೇಸ್ ದಾಖಲಾಗಿದೆ.

ಅಲ್ಲದೆ, ಚಾಲಕ ಶಿವಪುತ್ರ ಸನದಿ, ಮಾಲೀಕ ಬಾಬುಸಾಬ್ ಮುಲ್ತಾನಿ ಮತ್ತು ಇಂಗಳಿ ಗ್ರಾಮದ ಕೆಲವರ ಮೇಲೆಯೂ ಬಿಎನ್ಎಸ್102/2025ಕಲಂ 126(2) 127(2) 115(2) 118(1) ಅಡಿಯಲ್ಲಿ ದೂರು ದಾಖಲಾಗಿದೆ.

ಮಹಾವೀರ್‌ ಅನ್ನು ಕಲಬುರಗಿಗೆ ಗಡಿಪಾರು ಮಾಡಲಾಗಿತ್ತು. ಗಡಿ ಪಾರಾದ ರೌಡಿ ಶೀಟರ್ ಮಹಾವೀರ್ ಇಲ್ಲಿಗ್ಯಾಕೆ ಬಂದಿದ್ದ. ಒಬ್ಬ ರೌಡಿ ಶೀಟರ್‌ಗೆ ಸಂಘಟನೆಯವರು ಯಾಕೆ ಸಪೋರ್ಟ್ ಮಾಡ್ತಿದ್ದಾರೆ. ಇಂತವರ ಪರ ಪ್ರತಿಭಟನೆ ಮಾಡಲು ನಾವು ಅವಕಾಶ ಕೊಡಲ್ಲ ಎಂದು ಎಸ್‌ಪಿ ಹೇಳಿದ್ದಾರೆ.

ಘಟನೆಯ ಬಗ್ಗೆ ಬಾಬುಸಾಬ್ ಮುಲ್ತಾನಿ ಅವರ ಸಹೋದರಿ ಹೇಳಿದ್ದೇನು? :

ಘಟನೆಯ ಬಗ್ಗೆ ಬಾಬುಸಾಬ್ ಮುಲ್ತಾನಿ ಅವರ ಸಹೋದರಿ ಶಹನಾಝ್ ಅವರು ವಾರ್ತಾಭಾರತಿಗೆ ಹೇಳುವ ಪ್ರಕಾರ, ಎರಡು ದಿನಗಳ ಹಿಂದೆ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂದು ಆರೋಪಿಸಿ ಶ್ರೀರಾಮಸೇನೆ ಕಾರ್ಯಕರ್ತರು ಗೋವುಗಳ ಸಾಗಾಟ ತಡೆದಿದ್ದರು. ಈ ಗೋವುಗಳನ್ನು ಇಂಗಳಿ ಬಳಿಯ ಗೋಶಾಲೆಗೆ ರವಾನಿಸಲಾಗಿತ್ತು. ಅಲ್ಲಿಂದ ಗೋವುಗಳನ್ನು ಬಿಡಿಸಿಕೊಳ್ಳಲು ಹೋದ ಅವುಗಳ ಮಾಲಕರನ್ನು ಶ್ರೀರಾಮಸೇನೆಯ ಕಾರ್ಯಕರ್ತರು ಹಿಂಬಾಲಿಸಿದ್ದಾರೆ. ಅಲ್ಲದೇ , ಒಂದೂವರೆ ಲಕ್ಷರೂ  ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ ಗೋವುಗಳನ್ನು ಸಾಗಿಸಲು ಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ವೇಳೆ "ನಾವೇಕೆ ನಿಮಗೆ ಹಣ ಕೊಡಬೇಕು. ನೀವೇನು ಪೊಲೀಸರಾ" ಅಂತ ಕೇಳಿ ಹಣ ಕೊಡದೆ, ಗೋ ಶಾಲೆಗೆ 30 ಸಾವಿರ ರೂ ಮೇವು, ಕೂಲಿಯ ಹಣ ಕಟ್ಟಿ ಗೋವುಗಳನ್ನು ಮನೆಗೆ ತಂದಿದ್ದಾರೆ. ಅಲ್ಲದೇ, "ಇದು ಕಸಾಯಿ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದಲ್ಲ, ಇದನ್ನು ಸಾಕಲು ಕೊಂಡು ಹೋಗುತ್ತಿದ್ದೇವೆ. ನೀವು ಯಾವಾಗ ಬೇಕಾದರೂ ಬಂದು ನೋಡಿ, ಈ ಗೋವುಗಳು ನನ್ನ ಮನೆಯಲ್ಲೇ ಇರುತ್ತವೆ" ಎಂದು ಸ್ಪಷ್ಟವಾಗಿ ತಿಳಿಸಿದರೂ ಕೂಡಾ ಅದನ್ನು ಅವರು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ ಎಂದು ಅವರು ವಿವರಿಸಿದ್ದಾರೆ.

ಶ್ರೀರಾಮ್ ಸೇನೆಯ ಕಾರ್ಯಕರ್ತರು ಇವರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಅಲ್ಲದೆ , ದನಗಳ ಮಾಲೀಕ ಮನೆಯೊಳಗೆ ಬಂದಾಗ ಆತನ ಮನೆಗೆ ನುಗ್ಗಿದ್ದಾರೆ. ಮಹಿಳೆಯರು ಇದ್ದ ಮನೆಯಾಗಿತ್ತು ಅದು. ಹಾಗಾಗಿ ಮಹಿಳೆಯರು ಭಯದಿಂದ ಕೂಗಾಡಿದ್ದಾರೆ. ಈ ವೇಳೆ ಪರಸ್ಪರ ಎಳೆದಾಡಿಕೊಂಡಿದ್ದಾರೆ. ಅಲ್ಲದೆ, ತಡೆಯಲು ಹೋದ ಮಹಿಳೆಯೊಬ್ಬರನ್ನು ದೂಡಿ ಹಾಕಿದ್ದಾರೆ. ಮತ್ತೊಬ್ಬ ಮಹಿಳೆ ತಡೆಯಲು ಬಂದಾಗ ಅವರ ಮೇಲೆಯೂ ಕೈ ಹಾಕಿದ್ದಾರೆ. ಬೊಬ್ಬೆ ಕೇಳಿ ಊರಿನವರು ಸೇರಿದ್ದಾರೆ. ಊರವರನ್ನು ಕಂಡಾಗ ಮನೆಗೆ ನುಗ್ಗಿ ಬಳಿಕ ಪರಾರಿಯಾಗಲು ಯತ್ನಿಸುತ್ತಿದ್ದ ಯುವಕರನ್ನು ಎಲ್ಲರೂ ಸೇರಿ ಹಿಡಿದು ಯಾರು ನೀವು? ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ? ನಿಮ್ಮ ಉದ್ದೇಶ ಏನು ಎಂದು ಕೇಳಿ ಮರಕ್ಕೆ ಕಟ್ಟಿ ಹಾಕಿ ಒಂದೆರೆಡು ಏಟು ಕೊಟ್ಟಿದ್ದಾರೆ ಎಂದು ಶಹನಾಝ್ ಹೇಳಿದ್ದಾರೆ.

ನಮ್ಮ ಕುಟುಂಬ 20-30 ವರ್ಷದಿಂದ ದನಗಳ ವ್ಯಾಪಾರ ಮಾಡ್ತಾ ಇದ್ದೇವೆ. 2 ಎಕರೆ ಭೂಮಿ ಇದೆ. ಹೊಲದಿಂದ ಮೇವು ತರುತ್ತೇವೆ, ದನಗಳು ಜಾಸ್ತಿ ಇರುವುದರಿಂದ ಅಕ್ಕ ಪಕ್ಕದಿಂದಲೂ ಮೇವು ತರುತ್ತೇವೆ. ಹೆಚ್ಚಾಗಿ ನಮ್ಮ ತಂದೆ ತಾಯಿ ಯವರೇ ಈ ಕೆಲಸ ನೋಡಿಕೊಳ್ಳುವುದು. ನಾನು ಒಂದು ತಿಂಗಳಿನಿಂದ ಬೇರೆ ವಾಸ ಮಾಡುತ್ತಿದ್ದೇನೆ, ನಾನು ಕೆಲಸಕ್ಕೆ ಹೋದ ಸಮಯದಲ್ಲಿ ಇದೆಲ್ಲ ಆಗಿದೆ. ನನ್ನ ತಾಯಿ ಹುಕ್ಕೇರಿ ಆಸ್ಪತ್ರೆಯಲ್ಲಿದ್ದಾರೆ. ಆಂಬುಲೆನ್ಸ್ ಗೆ ಕರೆ ಮಾಡಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ತಾಯಿ ಮತ್ತು ಸೊಸೆ ಆಸ್ಪತ್ರೆಯಲ್ಲೇ ಇದ್ದಾರೆ. ಘಟನೆ ನಡೆಯುವಾಗ ಸ್ಥಳದಲ್ಲಿ ನಿಂತಿದ್ದ ನನ್ನ ಅಜ್ಜನನ್ನು ಯಮಕನಮರಡಿ ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎಂದು ಬಾಬುಸಾಬ್ ಮುಲ್ತಾನಿ ಅವರ ಸಹೋದರಿ ಶಹನಾಝ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!