×
Ad

ಮಹಿಳೆಯರ ವಿಶ್ವಕಪ್ | ನಾಳೆ ಮೊದಲ ಸೆಮಿ ಫೈನಲ್ : ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ಮಧ್ಯೆ ಸೆಣಸಾಟ

Update: 2025-10-28 23:18 IST

Photo Credit : AP

ಗುವಾಹಟಿ, ಅ.28: ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಬುಧವಾರ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಮೊದಲ ಸೆಮಿ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. 2ನೇ ಸೆಮಿ ಫೈನಲ್ ಪಂದ್ಯ ನಡೆಯುವ ನವಿ ಮುಂಬೈನಲ್ಲೂ ಮಳೆಯ ಕಾಟದ ಭೀತಿ ಇದೆ.

ನಿಗದಿತ ದಿನ ಓವರ್‌ಗಳನ್ನು ಕಡಿತ ಗೊಳಿಸಿದ ನಂತರವೂ ಫಲಿತಾಂಶ ಸಾಧ್ಯವಾಗದೇ ಇದ್ದರೆ ಮೀಸಲು ದಿನದಂದು ಪಂದ್ಯ ಮುಂದುವರಿಯಲಿದೆ. ಸೆಮಿ ಫೈನಲ್‌ನಲ್ಲಿ ಫಲಿತಾಂಶ ಬಾರದಿದ್ದರೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ತಂಡವು ಫೈನಲ್‌ಗೆ ಪ್ರವೇಶಿಸಲಿದೆ.

ಒಂದು ವೇಳೆ ಫೈನಲ್‌ನಲ್ಲಿ ಫಲಿತಾಂಶ ದಾಖಲಾಗದೆ ಇದ್ದರೆ ಟ್ರೋಫಿಯನ್ನು ಹಂಚಲಾಗುತ್ತದೆ.

50 ಓವರ್‌ಗಳ ವಿಶ್ವಕಪ್ ಟೂರ್ನಿಯ ನಾಕೌಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಎರಡು ಬಾರಿ ಸೋಲಿಸಿದೆ.

ಲೀಗ್ ಹಂತದಲ್ಲಿ ಆಡಿರುವ 7 ಪಂದ್ಯಗಳ ಪೈಕಿ 5ರಲ್ಲಿ ಜಯ ಸಾಧಿಸಿರುವ ಇಂಗ್ಲೆಂಡ್ ತಂಡ ಒಟ್ಟು 11 ಅಂಕಗಳನ್ನು ಗಳಿಸಿತು. ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯ ನಂತರ(7 ಪಂದ್ಯ, 13 ಅಂಕ)ಎರಡನೇ ಸ್ಥಾನಕ್ಕೇರಿದೆ.

ಮತೊಂದೆಡೆ ದಕ್ಷಿಣ ಆಫ್ರಿಕಾ ತಂಡವು 7 ಪಂದ್ಯಗಳಲ್ಲಿ 5ರಲ್ಲಿ ಜಯ, 2ರಲ್ಲಿ ಸೋಲನುಭವಿಸಿದ್ದು, ಒಟ್ಟು 10 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದಿತ್ತು.

ಗುವಾಹಟಿಯಲ್ಲಿ ನಡೆದ ಲೀಗ್ ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು 10 ವಿಕೆಟ್‌ಗಳ ಅಂತರದಿಂದ ಹೀನಾಯವಾಗಿ ಸೋಲಿಸಿತ್ತು.

ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡವು ಲಿನ್ಸಿ ಸ್ಮಿತ್(3-7), ನ್ಯಾಟ್ ಸಿವರ್-ಬ್ರಂಟ್(2-7), ಎಕ್ಲಸ್ಟೋನ್(2-19)ಹಾಗೂ ಚಾರ್ಲಿ ಡೀನ್(2-14) ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡವು 20.4 ಓವರ್‌ಗಳಲ್ಲಿ ಕೇವಲ 69 ರನ್‌ಗೆ ಆಲೌಟಾಗಿತ್ತು.

ಗೆಲ್ಲಲು 70 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡವು 14.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 73 ರನ್ ಗಳಿಸಿ ಸುಲಭ ಜಯ ದಾಖಲಿಸಿತು. ಆ್ಯಮಿ ಜೋನ್ಸ್ ಔಟಾಗದೆ 40 ರನ್ ಗಳಿಸಿದ್ದರು. ಲಿನ್ಸಿ ಸ್ಮಿತ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಪಂದ್ಯ ಆರಂಭದ ಸಮಯ: ಮಧ್ಯಾಹ್ನ 3:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News