ಮೋನಾ ಅಗರ್ವಾಲ್‌ | Photo Credit : x 

ಐಚಿ-ನಗೋಯಾ: ಭಾರತದ ಪ್ಯಾರಾ ಶೂಟರ್ ಮೋನಾ ಅಗರ್ವಾಲ್ ಅವರು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಎರಡನೇ ಚಿನ್ನದ ಪದಕ ಗೆದ್ದಿದ್ದು, ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ಸ್ ಎಸ್‌ಎಚ್1 ವಿಭಾಗದ ಫೈನಲ್‌ನಲ್ಲಿ 357.5 ಅಂಕಗಳೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ಸ್ವೀಡನ್‌ನ ಅನ್ನಾ ಬೆನ್ಸನ್ ಅವರು 2026ರ ಜುಲೈ 26ರಂದು ನೋವಿ ಸಾದ್‌ನಲ್ಲಿ ನಿರ್ಮಿಸಿದ್ದ 356 ಅಂಕಗಳ ಹಿಂದಿನ ವಿಶ್ವ ದಾಖಲೆಯನ್ನು ಮೋನಾ ಮುರಿದಿದ್ದಾರೆ. ಚೀನಾದ ಝಾಂಗ್ ಕುಯಿಪಿಂಗ್ 353.7 ಅಂಕಗಳೊಂದಿಗೆ ಬೆಳ್ಳಿ ಹಾಗೂ ದಕ್ಷಿಣ ಕೊರಿಯಾದ ಕಿಮ್ ಮ್ಯೌಂಗ್ 344.4 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದರು. ಭಾರತದ ಅವನಿ ಲೇಖರಾ 333.2 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರು.

ರಾಜಸ್ಥಾನದ ಸಿಕರ್ ಮೂಲದ 38 ವರ್ಷದ ಮೋನಾ, ಪ್ಯಾರಿಸ್-2024 ಪ್ಯಾರಾಲಿಂಪಿಕ್ಸ್‌ನಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದೀಗ ನಗೋಯಾದಲ್ಲಿ ಎರಡನೇ ಚಿನ್ನದೊಂದಿಗೆ ವಿಶ್ವ ದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ವಿಭಿನ್ನ ಕ್ರೀಡಾ ಪಯಣ

ಮೋನಾ ಅವರಿಗೆ 9 ತಿಂಗಳ ಮಗುವಾಗಿದ್ದಾಗ ಪೋಲಿಯೊ ತಗುಲಿದ್ದು, ಎರಡೂ ಕಾಲುಗಳ ಮೇಲೆ ಪರಿಣಾಮ ಬೀರಿತ್ತು. ಆದರೂ ಕ್ರೀಡೆಯೊಂದಿಗಿನ ಅವರ ನಂಟು ಮುಂದುವರಿಯಿತು. ರೈಫಲ್ ಶೂಟಿಂಗ್ ಆರಂಭಿಸುವ ಮೊದಲು ಪ್ಯಾರಾ ಅಥ್ಲೆಟಿಕ್ಸ್, ಪ್ಯಾರಾ ಪವರ್‌ಲಿಫ್ಟಿಂಗ್ ಮತ್ತು ಮಹಿಳೆಯರ ಸಿಟ್ಟಿಂಗ್ ವಾಲಿಬಾಲ್‌ನಲ್ಲಿ ಅವರು ತೊಡಗಿಸಿಕೊಂಡಿದ್ದರು.

2019ರಲ್ಲಿ ರಾಜಸ್ಥಾನದ ಮಹಿಳಾ ತಂಡದ ನಾಯಕಿಯಾಗಿ ಮೊದಲ ರಾಷ್ಟ್ರೀಯ ಸಿಟ್ಟಿಂಗ್ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆಲ್ಲಲು ನೆರವಾಗಿದ್ದರು. 2021ರ ಡಿಸೆಂಬರ್‌ನಲ್ಲಿ ಸ್ಪರ್ಧಾತ್ಮಕ ರೈಫಲ್ ಶೂಟಿಂಗ್ ಆರಂಭಿಸಿದ ಅವರು, ಶೀಘ್ರದಲ್ಲೇ ಯಶಸ್ಸು ಗಳಿಸಿದರು.

2022ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬೆಳ್ಳಿ ಪದಕ ಗೆದ್ದ ಮೋನಾ, 2023ರಲ್ಲಿ ಕ್ರೊಯೇಷಿಯಾದ ಒಸಿಯೆಕ್‌ನಲ್ಲಿ ನಡೆದ ವಿಶ್ವ ಶೂಟಿಂಗ್ ಪ್ಯಾರಾ ಸ್ಪೋರ್ಟ್ ವಿಶ್ವಕಪ್‌ನ ಮಿಶ್ರ ತಂಡ ವಿಭಾಗದಲ್ಲಿ ಕಂಚು ಗೆದ್ದರು. ಅದೇ ವರ್ಷ ದಕ್ಷಿಣ ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 ವಿಭಾಗದಲ್ಲಿ ಚಿನ್ನದ ಪದಕ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor