ತುಳಸಿಮತಿ | Photo Credit : X

ನಗೋಯ: ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಶುಕ್ರವಾರ ಒಂದು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ಗೆದ್ದಿರುವ ತುಳಸಿಮತಿ ಮುರುಗೇಶನ್ ತನ್ನ ಅಭಿಯಾನವನ್ನು ಸ್ಮರಣೀಯಗೊಳಿಸಿದರು.

ಮಾನಸಿ ಜೋಶಿ ಅವರೊಂದಿಗೆ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿರುವ ತುಳಸಿಮತಿ ತನ್ನ ಪದಕದ ಜೋಳಿಗೆಗೆ ಚಿನ್ನವನ್ನು ಸೇರಿಸಿಕೊಂಡರು.

24ರ ವಯಸ್ಸಿನ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ತುಳಸಿಮತಿ ಹಾಗೂ ಮಾನಸಿ ಮಹಿಳೆಯರ ಡಬಲ್ಸ್ ಎಸ್‌ಎಲ್‌3-ಎಸ್‌ಯು5 ಫೈನಲ್‌ನಲ್ಲಿ ಚೀನಾದ ಯಾಂಗ್ ಕ್ಸಿಯುಕ್ಸಿಯಾ ಹಾಗೂ ಕ್ಸಿಯಾವೊ ಝುಕ್ಸಿಯಾನ್‌ರನ್ನು 21-16, 21-13 ಗೇಮ್‌ಗಳ ಅಂತರದಿಂದ ಮಣಿಸಿದರು. ಭಾರತೀಯ ಜೋಡಿಯು 28 ನಿಮಿಷಗಳಲ್ಲಿ ಫೈನಲ್ ಪಂದ್ಯವನ್ನು ಜಯಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿತು.

ಇದಕ್ಕೂ ಮೊದಲು ತುಳಸಿಮತಿ ಮಹಿಳೆಯರ ಸಿಂಗಲ್ಸ್ ಎಸ್‌ಯು5 ಸ್ಪರ್ಧೆಯ ಫೈನಲ್‌ನಲ್ಲಿ ಚೀನಾದ ಯಾಂಗ್ ವಿರುದ್ಧ 18-21, 11-21 ಗೇಮ್‌ಗಳ ಅಂತರದಿಂದ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ಆ ನಂತರ ನಿತೇಶ್ ಕುಮಾರ್ ಅವರೊಂದಿಗೆ ಮಿಕ್ಸೆಡ್ ಡಬಲ್ಸ್ ಎಸ್‌ಎಲ್‌3-ಎಸ್‌ಯು5 ಫೈನಲ್ ಪಂದ್ಯದಲ್ಲಿ ಆಡಿದ ತುಳಸಿಮತಿ ಇಂಡೋನೇಶ್ಯದ ಲಿಯಾನಿ ರಾಟ್ರಿ ಒಕ್ಟಿಲಾ ಹಾಗೂ ಹಿಕ್ಮತ್ ರಾಂದಾನಿ ವಿರುದ್ಧ 21-11, 19-21, 14-21 ಅಂತರದಿಂದ ಸೋಲನುಭವಿಸಿ ಮತ್ತೊಮ್ಮೆ ಬೆಳ್ಳಿ ಪದಕ ಬಾಚಿಕೊಂಡರು.

ನಿತ್ಯಶ್ರೀ ಸುಮತಿ ಸಿವಾನ್ ಚೀನಾದ ಲೀ ಫೆಂಗ್‌ಮೀ ವಿರುದ್ಧ ಮಹಿಳೆಯರ ಸಿಂಗಲ್ಸ್ ಎಸ್‌ಎಚ್‌6 ಫೈನಲ್‌ನಲ್ಲಿ 12-21, 13-21 ಅಂತರದಿಂದ ಸೋಲನುಭವಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor