3ನೇ ಟಿ20 | ಮ್ಯಾಕ್ಸ್ ವೆಲ್ ಅಬ್ಬರದ ಬ್ಯಾಟಿಂಗ್; ಕೊನೆಯ ಓವರ್ ನಲ್ಲಿ ಆಸ್ಟ್ರೇಲಿಯಕ್ಕೆ ಜಯ, ಸರಣಿ ಕೈವಶ
ಮ್ಯಾಕ್ಸ್‌ವೆಲ್ | PC : X
ಕೈರ್ನ್ಸ್, ಆ.16: ಆಸ್ಟ್ರೇಲಿಯ ಕ್ರಿಕೆಟ್ ತಂಡವು ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ನಡೆದ 3ನೇ ಹಾಗೂ ಕೊನೆಯ ಟಿ20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ 2 ವಿಕೆಟ್ ಗಳ ಅಂತರದಿಂದ ರೋಚಕ ಜಯ ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.
ಕೇವಲ 36 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ ಔಟಾಗದೆ 62 ರನ್ ಗಳಿಸಿ ಅಬ್ಬರಿಸಿದ ಗ್ಲೆನ್ ಮ್ಯಾಕ್ಸ್ ವೆಲ್ ಗೆಲುವಿನ ರೂವಾರಿಯಾಗಿದ್ದು, ಸೀಮಿತ ಓವರ್ ಕ್ರಿಕೆಟ್ ನಲ್ಲಿ ಮತ್ತೊಮ್ಮೆ ಆಸ್ಟ್ರೇಲಿಯದ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಕೈರ್ನ್ಸ್‌ನಲ್ಲಿ ಮೊತ್ತ ಮೊದಲ ಬಾರಿ ನಡೆದ ಟಿ20 ಪಂದ್ಯ ವೀಕ್ಷಿಸಲು ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು. ಉಭಯ ತಂಡಗಳ ನಡುವಿನ ಈ ಪಂದ್ಯವು ಪ್ರೇಕ್ಷಕರಿಗೆ ಮನರಂಜನೆ ನೀಡಿತು.
ಗೆಲ್ಲಲು 173 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯ ತಂಡಕ್ಕೆ ಕೊನೆಯ ಎರಡು ಎಸೆತಗಳಲ್ಲಿ 4 ರನ್ ಅಗತ್ಯವಿತ್ತು. ಆಗ ರಿವರ್ಸ್ ಸ್ಕೂಪ್ ಮೂಲಕ ಬೌಂಡರಿ ಬಾರಿಸಿ ಮ್ಯಾಜಿಕ್ ಮಾಡಿದ ಮ್ಯಾಕ್ಸ್ ವೆಲ್ ಕೇವಲ 1 ಎಸೆತ ಇರವಾಗ ರೋಚಕ ಗೆಲುವು ತಂದುಕೊಟ್ಟರು. ಆ್ಯಡಮ್ ಝಂಪಾ ಮೈದಾನ ದೆಲ್ಲಡೆ ಕುಣಿದಾಡಿ ಮ್ಯಾಕ್ಸ್ ವೆಲ್ ರನ್ನು ಅಪ್ಪಿಕೊಂಡು ಸಂಭ್ರಮಿಸಿದರು.
ಮ್ಯಾಕ್ಸ್ ವೆಲ್ ಈ ಹಿಂದೆ ಸಾಕಷ್ಟು ಬಾರಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಈ ಬಾರಿ ತನ್ನದೇ ಶೈಲಿಯಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿ ತನ್ನ ಸಾಮರ್ಥ್ಯವನ್ನು ಟೀಕಿಸುತ್ತಿದ್ದವರಿಗೆ ಉತ್ತರ ನೀಡಿದ್ದಾರೆ. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸರಣಿಯಲ್ಲಿ ಒಟ್ಟು 150 ರನ್ ಗಳಿಸಿದ್ದ ಟಿಮ್ ಡೇವಿಡ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇನಿಂಗ್ಸ್ ಆರಂಭಿಸಿದ ನಾಯಕ ಮಿಚೆಲ್ ಮಾರ್ಷ್(54 ರನ್) ಹಾಗೂ ಟ್ರಾವಿಸ್ ಹೆಡ್(19 ರನ್) 8 ಓವರ್ ಗಳಲ್ಲಿ 66 ರನ್ ಜೊತೆಯಾಟ ನಡೆಸಿದರು. 37 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್ ಗಳ ಸಹಿತ 54 ರನ್ ಗಳಿಸಿದ ಮಾರ್ಷ್ ಅವರು ಆಸ್ಟ್ರೇಲಿಯಕ್ಕೆ ಆಸರೆಯಾದರು. ಆದರೆ 13 ಎಸೆತಗಳಲ್ಲಿ 3 ವಿಕೆಟ್ ಗಳನ್ನು ಉರುಳಿಸಿದ ದಕ್ಷಿಣ ಆಫ್ರಿಕಾ ತಂಡ ತಿರುಗೇಟು ನೀಡಿತು.
ಹೆಡ್, ಜೋಶ್ ಇಂಗ್ಲಿಸ್(0) ಹಾಗೂ ಮಾರ್ಷ್ ಬೆನ್ನುಬೆನ್ನಿಗೆ ಔಟಾದರು. ಕ್ಯಾಮರೂನ್ ಗ್ರೀನ್(9 ರನ್) ಅಲ್ಪ ಮೊತ್ತಕ್ಕೆ ಔಟಾದಾಗ ಆಸ್ಟ್ರೇಲಿಯ 88 ರನ್‌ಗೆ 4ನೇ ವಿಕೆಟ್ ಕಳೆದುಕೊಂಡಿತು. ಆಗ 5ನೇ ವಿಕೆಟ್ ಗೆ ಟಿಮ್ ಡೇವಿಡ್(17 ರನ್) ಜೊತೆ 14 ಎಸೆತಗಳಲ್ಲಿ 32 ರನ್ ಸೇರಿಸಿದ ಮ್ಯಾಕ್ಸ್ ವೆಲ್ ತಂಡವನ್ನು ಆಧರಿಸಿದರು. ಡೇವಿಡ್ ಹಾಗೂ ಹಾರ್ಡಿ(1 ರನ್) ಕಾಗಿಸೊ ರಬಾಡ (2-32)ಎಸೆದ 14ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದಾಗ ಡ್ವಾರ್ಶುಯಿಸ್(1) ಅವರೊಂದಿಗೆ 7ನೇ ವಿಕೆಟ್ ಗೆ 29 ಎಸೆತಗಳಲ್ಲಿ 41 ರನ್ ಸೇರಿಸಿದ ಮ್ಯಾಕ್ಸ್ ವೆಲ್ ಆಸ್ಟ್ರೇಲಿಯವನ್ನು ಗೆಲುವಿನತ್ತ ಮುನ್ನಡೆಸಿದರು.
ಆಸ್ಟ್ರೇಲಿಯ ಟಿ20 ಕ್ರಿಕೆಟ್ ನಲ್ಲಿ ಸದ್ಯ ಭರ್ಜರಿ ಫಾರ್ಮ್ ನಲ್ಲಿದೆ. ಸ್ಕಾಟ್‌ಲ್ಯಾಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಜಯಿಸಿದರೆ, ಇಂಗ್ಲೆಂಡ್ ವಿರುದ್ಧ ಸರಣಿ ಸಮಬಲಗೊಳಿಸಿತ್ತು.
ದಕ್ಷಿಣ ಆಫ್ರಿಕಾ 172/7:
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 172 ರನ್ ಕಲೆ ಹಾಕಿತು. ಯುವ ಆಟಗಾರ ಡೆವಾಲ್ಡ್ ಬ್ರೆವಿಸ್(53 ರನ್, 26 ಎಸೆತ)ಮತ್ತೊಮ್ಮೆ ಬಿರುಸಿನ ಬ್ಯಾಟಿಂಗ್ ಮೂಲಕ ತಂಡಕ್ಕೆ ಶಕ್ತಿ ತುಂಬಿದರು.
ರಾಸ್ಸಿ ವಾನ್ ಡರ್ ಡುಸ್ಸೆನ್(ಔಟಾಗದೆ 38, 26 ಎಸೆತ), ಟ್ರಿಸ್ಟನ್ ಸ್ಟಬ್ಸ್(25 ರನ್, 23 ಎಸೆತ) ಹಾಗೂ ಪ್ರಿಟೋರಿಯಸ್(24 ರನ್, 15 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಮೊದಲ ಓವರ್ ನ 5ನೇ ಎಸೆತದಲ್ಲಿ ನಾಯಕ ಮರ್ಕ್ರಮ್ ವಿಕೆಟನ್ನು ಕಳೆದುಕೊಂಡ ದಕ್ಷಿಣ ಆಫ್ರಿಕಾ ಕಳಪೆ ಆರಂಭ ಪಡೆಯಿತು. ಪ್ರಿಟೋರಿಯಸ್ ಹಾಗೂ ರಿಕೆಲ್ಟನ್(13 ರನ್)2ನೇ ವಿಕೆಟ್ ಗೆ 30 ರನ್ ಸೇರಿಸಿ ಇನಿಂಗ್ಸ್ ರಿಪೇರಿಗೆ ಯತ್ನಿಸಿದರು.
ಪ್ರಿಟೋರಿಯಸ್ ಹಾಗೂ ರಿಕೆಲ್ಟನ್ ವಿಕೆಟ್ ಒಪ್ಪಿಸಿದಾಗ 4ನೇ ವಿಕೆಟ್ ಗೆ 61 ರನ್ ಜೊತೆಯಾಟ ನಡೆಸಿದ ಬ್ರೆವಿಸ್ ಹಾಗೂ ಸ್ಟಬ್ಸ್ ತಂಡವು ಸ್ಪರ್ಧಾತ್ಮಕ ಮೊತ್ತ ಗಳಿಸುವಲ್ಲಿ ನೆರವಾದರು.
ಆಸ್ಟ್ರೇಲಿಯದ ಬೌಲಿಂಗ್ ವಿಭಾಗದಲ್ಲಿ ನಾಥನ್ ಎಲ್ಲಿಸ್(3-31) ಯಶಸ್ವಿ ಪ್ರದರ್ಶನ ನೀಡಿದರು. ಆ್ಯಡಮ್ ಝಂಪಾ(2-24) ಹಾಗೂ ರಬಾಡ(2-30) ತಲಾ ಎರಡು ವಿಕೆಟ್ ಗಳನ್ನು ಪಡೆದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ: 20 ಓವರ್ ಗಳಲ್ಲಿ 172/7
(ಡೆವಾಲ್ಡ್ ಬ್ರೆವಿಸ್ 53, ರಾಸ್ಸಿ ವಾನ್ ಡರ್ ಡುಸೆನ್ ಔಟಾಗದೆ 38, ಸ್ಟಬ್ಸ್ 25, ಪ್ರಿಟೋರಿಯಸ್ 24, ಎಲ್ಲಿಸ್ 3-31, ಝಂಪಾ 2-24, ಹೇಝಲ್ ವುಡ್ 2-30)