ಶಹೀನ್, ರವೂಫ್ ನಿಂದನೆಗೆ ಬ್ಯಾಟಿಂಗ್ ಮೂಲಕ ಉತ್ತರಿಸಿದ ಅಭಿಷೇಕ್ ಶರ್ಮಾ!
PC: screengrab/ instagram.com/fayaz_salimi
ದುಬೈ: ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಎಂದಿಗೂ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ. ರವಿವಾರ ನಡೆದ ಏಷ್ಯಾಕಪ್ ಸೂಪರ್4 ಹಂತದ ಹೈವೋಲ್ಟೇಜ್ ಪಂದ್ಯ ಕೂಡಾ ಇದಕ್ಕೆ ಹೊರತಾಗಿರಲಿಲ್ಲ. 172 ರನ್ ಗಳ ಗುರಿಪಡೆದ ಭಾರತದ ಆರಂಭಿಕ ಜೋಡಿ ಕೇವಲ 8.4 ಓವರ್ ಗಳಲ್ಲಿ 100 ರನ್ ಸೇರಿಸಿ ಭಾರತದ ವಿಜಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು.
ಪಂದ್ಯಕ್ಕೆ ಮುನ್ನ ಹಾಗೂ ಪಂದ್ಯದ ವೇಳೆ ಪಾಕಿಸ್ತಾನದ ಬೌಲರ್ ಗಳಾದ ಶಹೀನ್ ಶಾ ಅಫ್ರೀದಿ ಹಾಗೂ ಹ್ಯಾರೀಸ್ ರವೂಫ್ ಭಾರತದ ಬ್ಯಾಟ್ಸ್ ಮನ್ ಗಳನ್ನು ಕೆಣಕಿದ್ದಕ್ಕೆ ಆರಂಭಿಕ ಜೋಡಿ ಭರ್ಜರಿ ಬ್ಯಾಟಿಂಗ್ ಮೂಲಕ ಉತ್ತರ ನೀಡಿತು. ಎದುರಾಳಿ ಬೌಲರ್ ಗಳು ಪಂಜಾಬಿ ಭಾಷೆಯಲ್ಲಿ ಅಭಿಷೇಕ್ ಶರ್ಮಾ ಅವರನ್ನು ಕೆಣಕಿದರು. ಶಹೀನ್ ಅವರ ಮೊದಲ ಎಸೆತದಲ್ಲಿ ಸಿಕ್ಸರ್ ಹೊಡೆಯುವ ಮೂಲಕ ಶರ್ಮಾ ಇದಕ್ಕೆ ಪ್ರತ್ಯುತ್ತರ ನೀಡಿದರು.
ಇದಾದ ಬಳಿಕ ಸುಮ್ಮನಿರದ ಶಹೀನ್, ಗಿಲ್ ಜತೆಗೆ ತಗಾದೆ ತೆಗೆದರು. ಗಿಲ್ ಕೂಡಾ ಶಹೀನ್ ಅವರನ್ನು ದಿಟ್ಟಿಸಿ ನೋಡಿ ಚೆಂಡು ಹೋದತ್ತ ಬೆಟ್ಟು ಮಾಡಿದರು. ಇದು 1996 ಅಮೀರ್ ಸೊಹೈಲ್- ವೆಂಕಿ ಪ್ರಸಾದ್ ಘಟನೆಯನ್ನು ನೆನಪಿಸಿತು. ಹ್ಯಾರೀಸ್ ರವೂಫ್, ಅಭಿಷೇಕ್ ಶರ್ಮಾರನ್ನು ಗುರಿ ಮಾಡಿದಾಗಲೂ ಎರಡು ಬೌಂಡರಿಗಳ ಮೂಲಕ ಎದುರಾಳಿಗೆ ಪ್ರತ್ಯುತ್ತರ ನೀಡಿದರು. ಆಗ ಇಬ್ಬರನ್ನೂ ಬೇರ್ಪಡಿಸಲು ಅಂಪೈರ್ ಗಳು ಮಧ್ಯಪ್ರವೇಶಿಸಬೇಕಾಯಿತು!
ಅಭಿಷೇಕ್ ಶರ್ಮಾ ಸಿಕ್ಸರ್ ನೊಂದಿಗೆ ಭರ್ಜರಿಯಾಗಿ ಇನಿಂಗ್ಸ್ ಆರಂಭಿಸಿದರೆ, ಪಂದ್ಯಕ್ಕೆ ಮುನ್ನ ಅಭ್ಯಾಸದ ವೇಳೆ ಬೆವರು ಹರಿಸಿದ್ದ ಗಿಲ್, ಸಯೀಮ್ ಅಯೂಬ್ ಅವರ ಆಫ್ಸ್ಪಿನ್ ವಿರುದ್ಧ ಲೀಲಾಜಾಲವಾಗಿ ಬ್ಯಾಟ್ ಬೀಸಿ ಅಧಿಕಾರಯುತ ಬೌಂಡರಿ ಗಳಿಸಿದರು. ಅರ್ಬರ್ ಅಹ್ಮದ್ ಬೌಲಿಂಗ್ನಲ್ಲಿ ಅಭಿಷೇಕ್ ಶರ್ಮಾ ಎರಡು ಸಿಕ್ಸರ್ ಹೊಡೆದರೆ, ಗಿಲ್ ರಿವರ್ಸ್ ಸ್ವೀಪ್ ಹೊಡೆತಗಳ ಮೂಲಕ ಗಮನ ಸೆಳೆದರು. 24 ಗಂಟೆ ಹಿಂದಷ್ಟೇ ಅಭಿಷೇಕ್ ಶರ್ಮಾ, ಗಿಲ್ ಅವರ ರಿವರ್ಸ್ ಸ್ವೀಪ್ ಹೊಡೆತಗಳ ಬಗ್ಗೆ ಅಣಕಿಸಿದ್ದಕ್ಕೆ ತಕ್ಕ ಉತ್ತರ ನೀಡಿದರು.