×
Ad

‘ಏರೋ ಇಂಡಿಯಾ-2025’ | ಏಷ್ಯಾದ ಅತಿದೊಡ್ಡ ಬಾಹ್ಯಾಕಾಶ-ರಕ್ಷಣಾ ಪ್ರದರ್ಶನಕ್ಕೆ ಅದ್ಧೂರಿ ಚಾಲನೆ

Update: 2025-02-10 20:19 IST

PC : ANI 

ಬೆಂಗಳೂರು: ಬೆಂಗಳೂರಿನ ಯಲಹಂಕದಲ್ಲಿರುವ ವಾಯುಸೇನಾ ನೆಲೆಯಲ್ಲಿ ಆಯೋಜಿಸಲಾಗಿರುವ ಏಷ್ಯಾದ ಅತಿದೊಡ್ಡ ಬಾಹ್ಯಾಕಾಶ ಮತ್ತು ರಕ್ಷಣಾ ಪ್ರದರ್ಶನ ‘ಏರೋ ಇಂಡಿಯಾ-2025’ಕ್ಕೆ ಸೋಮವಾರ ಅದ್ಧೂರಿ ಚಾಲನೆ ನೀಡಲಾಯಿತು.

‘ದಿ ರನ್ ವೇ ಟು ಎ ಬಿಲಿಯನ್ ಅರ್ಚುನಿಟೀಸ್’(ಶತಕೋಟಿ ಅವಕಾಶಗಳಿಗೆ ರಹದಾರಿ) ಎಂಬ ಧ್ಯೇಯದೊಂದಿಗೆ ಈ ಸಾಲಿನ ವೈಮಾನಿಕ ಪ್ರದರ್ಶನ ವಿದ್ಯುಕ್ತವಾಗಿ ಆರಂಭಗೊಂಡಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾದ 15ನೇ ಆವೃತ್ತಿ ಇದಾಗಿದೆ. ಫೆ.10 ರಿಂದ 14ರ ವರೆಗೆ ನಡೆಯಲಿರುವ ಈ ವೈಮಾನಿಕ ಪ್ರದರ್ಶನದಲ್ಲಿ ಜಾಗತಿಕ ವೈಮಾನಿಕ ಕಂಪೆನಿಗಳ ಅತ್ಯಾಧುನಿಕ ಉತ್ಪನ್ನಗಳ ಜೊತೆಗೆ ಭಾರತದ ವೈಮಾನಿಕ ಪರಾಕ್ರಮ ಮತ್ತು ಸ್ಥಳೀಯ ಅತ್ಯಾಧುನಿಕ ನಾವೀನ್ಯತೆಗಳು ಪ್ರದರ್ಶಿಸಲ್ಪಡಲಿವೆ.

‘ಏರೋ ಇಂಡಿಯಾ-2025’ ನಿರ್ಣಾಯಕ ಮತ್ತು ಮುಂಚೂಣಿ ತಂತ್ರಜ್ಞಾನಗಳ ಸಂಗಮವಾಗಿದ್ದು, ಇಂದಿನ ಅನಿಶ್ಚಿತತೆಗಳನ್ನು ನಿರ್ವಹಿಸಲು ಪರಸ್ಪರ ಗೌರವ, ಪರಸ್ಪರ ಆಸಕ್ತಿ ಮತ್ತು ಪರಸ್ಪರ ಲಾಭದ ಆಧಾರದ ಮೇಲೆ ಸಮಾನ ಮನಸ್ಕ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಬಲವರ್ಧನೆಗೊಳಿಸಲು ವೇದಿಕೆ ಒದಗಿಸುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಏರೋ ಇಂಡಿಯಾ ದೇಶದ ಕೈಗಾರಿಕಾ ಸಾಮರ್ಥ್ಯ ಮತ್ತು ತಾಂತ್ರಿಕ ಪ್ರಗತಿಯನ್ನು ಇಡೀ ವಿಶ್ವಕ್ಕೆ ಪ್ರದರ್ಶಿಸುತ್ತದೆ ಮತ್ತು ಮಿತ್ರ ರಾಷ್ಟ್ರಗಳೊಂದಿಗೆ ಸಹಜೀವನದ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ. ರಾಷ್ಟ್ರಗಳು ಒಗ್ಗೂಡಿ ಶಕ್ತಿಶಾಲಿಯಾಗಿ ಉತ್ತಮ ವಿಶ್ವ ವ್ಯವಸ್ಥೆಗಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಶಾಶ್ವತ ಶಾಂತಿಯನ್ನು ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.

ಐದು ದಿನಗಳ ಈ ಕಾರ್ಯಕ್ರಮದಲ್ಲಿ ಸರಕಾರಿ ಪ್ರತಿನಿಧಿಗಳು, ಕೈಗಾರಿಕೆಗಳ ನಾಯಕರು, ವಾಯುಪಡೆಯ ಅಧಿಕಾರಿಗಳು, ವಿಜ್ಞಾನಿಗಳು, ರಕ್ಷಣಾ ವಲಯದ ತಜ್ಞರು, ನವೋದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಜಗತ್ತಿನಾದ್ಯಂತದ ಇತರ ಪಾಲುದಾರರು ಭಾಗವಹಿಸಲಿದ್ದಾರೆ ಮತ್ತು ಈ ಸಂಗಮವು ಭಾರತದ ಪಾಲುದಾರರನ್ನು ಎಲ್ಲರಿಗೂ ಪ್ರಯೋಜನ ತಲುಪುವಂತೆ ಮಾಡುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್, ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫಿಯು ರಿಯೊ, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ.ತ್ರಿಪಾಠಿ, ಸೇನಾಪಡೆ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್, ಕಾರ್ಯದರ್ಶಿ (ರಕ್ಷಣಾ ಉತ್ಪಾದನೆ) ಸಂಜೀವ್ ಕುಮಾರ್ ಮತ್ತು ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಎಸ್‌ಪಿ ಧಾರ್ಖರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

*ರಾಜ್‌ನಾಥ್ ಭಾಷಣದ ಹೆಲೈಟ್ಸ್...

► ‘ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ‘ಮಹಾಕುಂಭವು ಆತ್ಮಾವಲೋಕನದ ಕುಂಭವಾಗಿದ್ದರೆ, ಏರೋ ಇಂಡಿಯಾ ಸಂಶೋಧನೆಯ ಕುಂಭವಾಗಿದೆ’. ಮಹಾಕುಂಭವು ಆಂತರಿಕ ಶಕ್ತಿಯ ಮೇಲೆ ಕೇಂದ್ರೀಕರಿಸಿದರೆ, ಏರೋ ಇಂಡಿಯಾ ಬಾಹ್ಯ ಶಕ್ತಿಯ ಮೇಲೆ ಕೇಂದ್ರೀಕರಿಸುತ್ತದೆ. ಮಹಾ ಕುಂಭವು ಭಾರತದ ಸಂಸ್ಕೃತಿಯನ್ನು ಪ್ರದರ್ಶಿಸಿದರೆ, ಏರೋ ಇಂಡಿಯಾ ಭಾರತದ ಶಕ್ತಿಯನ್ನು ಪ್ರದರ್ಶಿಸುತ್ತದೆ’.

►  ಏರ್‌ಶೋನಲ್ಲಿ ನಮ್ಮ ವಿದೇಶಿ ಮಿತ್ರರ ಉಪಸ್ಥಿತಿಯು ನಮ್ಮ ಪಾಲುದಾರರು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ನಮ್ಮ ದೂರದೃಷ್ಟಿಯನ್ನು ಹಂಚಿಕೊಳ್ಳುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ’

► ಮುಂಬರುವ ದಿನಗಳಲ್ಲಿ 1.27 ಲಕ್ಷ ಕೋಟಿ ರೂ. ಮೌಲ್ಯದ ರಕ್ಷಣಾ ಉತ್ಪಾದನೆ ಮತ್ತು ರಕ್ಷಣಾ ಸಾಧನಗಳ ರಫ್ತು ಪ್ರಮಾಣ 21 ಸಾವಿರ ಕೋಟಿ ರೂ. ದಾಟಲಿದೆ.

► 2025 ಅನ್ನು ರಕ್ಷಣಾ ಸಚಿವಾಲಯದಲ್ಲಿ‘ಸುಧಾರಣೆಗಳ ವರ್ಷ’ ವಾಗಿ ಆಚರಿಸಲಾಗುವುದು.

► ಅಸ್ತ್ರ ಕ್ಷಿಪಣಿ, ಹೊಸ ತಲೆಮಾರಿನ ಆಕಾಶ್ ಕ್ಷಿಪಣಿ, ಮಾನವರಹಿತ ಮೇಲ್ಮೈ ಹಡಗು, ಪಿನಾಕಾ ಮಾರ್ಗದರ್ಶಿ ರಾಕೆಟ್‌ನಂತಹ ಹಲವು ಅತ್ಯಾಧುನಿಕ ಉತ್ಪನ್ನಗಳನ್ನು ದೇಶದಲ್ಲಿಯೇ ತಯಾರಿಸಲಾಗುತ್ತಿದೆ.

► ಭಾರತವು ಪರಿವರ್ತನೆಯ ಹಾದಿಯಲ್ಲಿ ಸಾಗುತ್ತಿದೆ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕೆ ವೇಗವಾಗಿ ಬದಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಮ್ಜದ್ ಖಾನ್ ಎಂ.

contributor

Similar News