ಅಮೆರಿಕನ್ ಓಪನ್ | ಜೊಕೊವಿಕ್, ಝ್ವೆರೆವ್ ಮೂರನೇ ಸುತ್ತಿಗೆ ಲಗ್ಗೆ
ನೊವಾಕ್ ಜೊಕೊವಿಕ್ , ಅಲೆಕ್ಸಾಂಡರ್ ಝ್ವೆರೆವ್ | PC : PTI
ನ್ಯೂಯಾರ್ಕ್: ಹಾಲಿ ಯು.ಎಸ್. ಓಪನ್ ಚಾಂಪಿಯನ್ ನೊವಾಕ್ ಜೊಕೊವಿಕ್ ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗೆಲ್ಲುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಸರ್ಬಿಯದ ಜೊಕೊವಿಕ್ ಅವರು ತಮ್ಮದೇ ದೇಶದ ಲಾಸ್ಲೊ ಜೆರೆ ಅವರನ್ನು 6-4, 6-4, 2-0 ಅಂತರದಿಂದ ಮಣಿಸಿದರು.
ಲಾಸ್ಲೊ ಮೂರನೇ ಸೆಟ್‌ನಲ್ಲಿ 0-2ರಿಂದ ಹಿನ್ನಡೆಯಲ್ಲಿದ್ದಾಗ ಗಾಯಗೊಂಡು ನಿವೃತ್ತಿಯಾದರು.
ಕಳೆದ ವರ್ಷ ಮೂರನೇ ಸುತ್ತಿನಲ್ಲಿ ಲಾಸ್ಲೊ ವಿರುದ್ಧ ಮೇಲುಗೈ ಸಾಧಿಸಲು ಜೊಕೊವಿಕ್ ಐದು ಸೆಟ್‌ಗಳ ತನಕ ಹೋರಾಡಿದ್ದರು. ಆದರೆ ಈ ಬಾರಿ ಗಾಯದ ಸಮಸ್ಯೆಯು ಲಾಸ್ಲೊ ಅವರ ಪ್ರಯತ್ನಕ್ಕೆ ಧಕ್ಕೆ ಉಂಟು ಮಾಡಿದೆ.
ಮೂರನೇ ಸುತ್ತಿಗೇರಿದ 4 ಬಾರಿಯ ಯು.ಎಸ್. ಓಪನ್ ಚಾಂಪಿಯನ್ ಜೊಕೊವಿಕ್ ಆಸ್ಟ್ರೇಲಿಯದ ಅಲೆಕ್ಸಿ ಪೊಪಿರಿನ್‌ರನ್ನು ಎದುರಿಸಲಿದ್ದಾರೆ.
ಝ್ವೆರೆವ್ ಮೂರನೇ ಸುತ್ತಿಗೆ ಪ್ರವೇಶ: ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಯು.ಎಸ್. ಓಪನ್‌ನಲ್ಲಿ ಬುಧವಾರ ಅಲೆಕ್ಸಾಂಡರ್ ಮುಲ್ಲರ್‌ರನ್ನು ಮಣಿಸಿ ಮೂರನೇ ಸುತ್ತಿಗೇರಿದ್ದಾರೆ.
4ನೇ ಶ್ರೇಯಾಂಕದ ಝ್ವೆರೆವ್ ಅವರು ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನ ಪಂದ್ಯದಲ್ಲಿ ವಿಶ್ವದ 77ನೇ ರ್ಯಾಂಕಿನ ಮುಲ್ಲರ್‌ರನ್ನು 6-4, 7-6(5), 6-1 ಸೆಟ್‌ಗಳ ಅಂತರದಿಂದ ಮಣಿಸಿದರು.
ಝ್ವೆರೆವ್ 2ನೇ ಸುತ್ತಿನ ಪಂದ್ಯದಲ್ಲಿ ಮುಲ್ಲರ್‌ರಿಂದ ಒಂದಷ್ಟು ಸವಾಲನ್ನು ಎದುರಿಸಿದ ಹೊರತಾಗಿಯೂ ಮೊದಲ ಬಾರಿ ಪ್ರಮುಖ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.