ಫಿಫಾದಿಂದ ಅನುಮತಿ ವಿಳಂಬ: ಭಾರತ-ಅರ್ಜೆಂಟೀನ ಫುಟ್ಬಾಲ್ ತಂಡಗಳ ಸೌಹಾರ್ದ ಪಂದ್ಯ ಮುಂದೂಡಿಕೆ
ಸಾಂದರ್ಭಿಕ ಚಿತ್ರ | Photo Credit : NDTV
ಕೊಚ್ಚಿ: ಫಿಫಾದಿಂದ ಅನುಮತಿಯನ್ನು ಸ್ವೀಕರಿಸುವುದರಲ್ಲಿ ವಿಳಂಬವಾಗಿದ್ದರಿಂದ ಭಾರತ ಹಾಗೂ ಲಿಯೊನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನ ಫುಟ್ಬಾಲ್ ತಂಡಗಳ ನಡುವೆ ನಡೆಯಬೇಕಿದ್ದ ಬಹು ನಿರೀಕ್ಷಿತ ಸೌಹಾರ್ದ ಪಂದ್ಯವನ್ನು ಮುಂದೂಡಲಾಗಿದೆ ಎಂದು ಪಂದ್ಯದ ಸಂಘಟಕರು ತಿಳಿಸಿದ್ದಾರೆ.
ಆರಂಭದಲ್ಲಿ ನವೆಂಬರ್ 17ರಂದು ಕೊಚ್ಚಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದ ಈ ಪಂದ್ಯವನ್ನು ಭವಿಷ್ಯದ ಫಿಫಾ ಅಂತರ್ ರಾಷ್ಟ್ರೀಯ ವೇಳಾಪಟ್ಟಿಯನ್ವಯ ಆಯೋಜಿಸಲು ನಿರ್ಧರಿಸಲಾಗಿದೆ.
ರಿಪೋರ್ಟರ್ ಬ್ರಾಡ್ ಕಾಸ್ಟಿಂಗ್ ಕಂಪನಿ ಹಾಗೂ ಎಮರಾಜ್ ಗ್ರೂಪ್ ಇಂಟರ್ ನ್ಯಾಶನಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆ್ಯಂಟೊ ಆಗಸ್ಟಿನ್ ಅವರು ಪಂದ್ಯ ಮುಂದೂಡಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ದೃಢಪಡಿಸಿದ್ದಾರೆ.
“ಫಿಫಾದಿಂದ ಅನುಮತಿ ಸ್ವೀಕರಿಸುವಲ್ಲಿ ವಿಳಂಬವಾಗಿದ್ದನ್ನು ಪರಿಗಣಿಸಿ ಅರ್ಜೆಂಟೀನ ಫುಟ್ಬಾಲ್ ಅಸೋಸಿಯೇಶನ್ ನೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ನವೆಂಬರ್ ತಿಂಗಳಲ್ಲಿ ನಡೆಯಬೇಕಿದ್ದ ಈ ಪಂದ್ಯವನ್ನು ಮುಂದೂಡಲು ನಿರ್ಧರಿಸಲಾಗಿದೆ. ಪಂದ್ಯದ ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು'' ಎಂದು ಅವರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಈ ಪಂದ್ಯ ನಡೆಯುವ ಕುರಿತು ಹಲವು ವಾರಗಳಿಂದ ಮೂಡಿದ್ದ ಅನಿಶ್ಚಿತತೆಯ ಬಳಿಕ ಈ ಪ್ರಕಟನೆ ಹೊರ ಬಿದ್ದಿದೆ.
ಕೇರಳ ಕ್ರೀಡಾ ಸಚಿವರು ಈ ಪಂದ್ಯದ ಯೋಜನೆಯನ್ನು ಬಹಿರಂಗಗೊಳಿಸಿದ ಬೆನ್ನಿಗೇ ವ್ಯತಿರಿಕ್ತ ಹೇಳಿಕೆಗಳು ಬಂದಿದ್ದವು. ಒಂದು ಹಂತದಲ್ಲಿ ಸದ್ಯಕ್ಕೆ ಈ ಪಂದ್ಯ ರದ್ದುಗೊಂಡಿದೆ ಎಂದು ಕೇರಳ ಕ್ರೀಡಾ ಸಚಿವರು ಹೇಳಿದ್ದರು. ಕೊಚ್ಚಿಯಲ್ಲಿ ಅರ್ಜೆಂಟೀನ ತಂಡ ಆಡಲಿದೆ ಎಂದು ಆಗಸ್ಟ್ ತಿಂಗಳಲ್ಲಿ ಎಎಫ್ಎ ದೃಢಪಡಿಸಿತ್ತು.
2026ರ ಮಾರ್ಚ್ ನಲ್ಲಿ ಸೌಹಾರ್ದ ಪಂದ್ಯ ಮರು ನಿಗದಿಯಾಗುವ ಸಾಧ್ಯತೆ ಇದೆ ಎಂದು ಇತ್ತೀಚೆಗೆ ಅರ್ಜೆಂಟೀನ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ಕುರಿತು ಅಧಿಕೃತ ಹೇಳಿಕೆ ಬಂದಿಲ್ಲ.